ಬೆಂಗಳೂರು: ಕೋವಿಡ್ 19 ಸಂದರ್ಭದಲ್ಲಿ ಆತ್ಮನಿರ್ಭರತೆ, ವಿಶ್ವಬಂಧುತ್ವ ಮತ್ತು ರಾಜಕಾರಣ ಎಂಬ ವಿಚಾರದ ಬಗ್ಗೆ ಪ್ರಜ್ಞಾ ಪ್ರವಾಹ ಕರ್ನಾಟಕ ವಿಭಾಗದ ವತಿಯಿಂದ ಆಯೋಜಿಸಲಾದ ಫೇಸ್ಬುಕ್ ಲೈವ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಮಾತನಾಡಿದರು.
ಕಳೆದೊಂದು ವರ್ಷದಿಂದ ಕೊರೋನಾ ಚೈನೀಸ್ ವೈರಸ್ನ ತಲ್ಲಣದ ವಾತಾವರಣದ ನಡುವೆ ನಾವಿದ್ದೇವೆ. ಇಂತಹ ವೈರಸ್ ಚೀನಾದ ವೆಟ್ ಮಾರ್ಕೆಟ್ನಿಂದ ಬಂದಿದ್ದೋ ಅಥವಾ ಲ್ಯಾಬ್ನಿಂದ ಸೃಷ್ಟಿಯಾಗಿರುವುದೋ ಎಂಬ ಜಿಜ್ಞಾಸೆ ಇನ್ನೂ ಇದೆ. ಜಗತ್ತಿನ ಎಲ್ಲಾ ದೇಶಗಳಿಗೆ ಈ ಸೋಂಕು ಹರಡಿತು. ಆರಂಭದಲ್ಲಿ ಇಟಲಿ ಮತ್ತು ಆ ಬಳಿಕ ಎಲ್ಲಾ ದೇಶಗಳಿಗೂ ಇದು ಹಬ್ಬಿದೆ. ಭಾರತದಲ್ಲಿ 12 ಕೋಟಿ ಜನ ಕೊರೋನಾ ಬಾಧಿತರಾಗಿದ್ದಾರೆ. 2 ಲಕ್ಷಗಳಷ್ಟು ಮಂದಿ ಮೃತಪಟ್ಟಿದ್ದಾರೆ ಎಂದರು.
ಕುಂಭಮೇಳದ ಹೊರತಾಗಿ ಮಾರ್ಚ್ ತಿಂಗಳಲ್ಲೇ ಮಹಾರಾಷ್ಟ್ರದಲ್ಲಿ ಕೊರೋನಾ ಇತ್ತು. ಮತ್ತು ಕರ್ನಾಟಕ, ಕೇರಳ ಸೇರಿದಂತೆ ಇನ್ನೂ ಹಲವು ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಲ್ಲಿ ಕೊರೋನಾ ಪ್ರಮಾಣ ಹೆಚ್ಚಾಗಿದೆ. ಸದ್ಯ ಕೊಂಚ ಇಳಿಕೆಯ ಪ್ರಮಾಣ ಕಂಡುಬರುತ್ತಿದೆ. ಎಲ್ಲಾ ರಾಜ್ಯಗಳಲ್ಲೂ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಕರ್ನಾಟಕ, ಕೇರಳ, ತಮಿಳುನಾಡು ಗಳಲ್ಲಿ ಬಿಟ್ಟರೆ ಉಳಿದೆಡೆಗಳಲ್ಲಿ ಕೊಂಚ ನಿಯಂತ್ರಣದಲ್ಲಿ ಕೊರೋನಾ ಇದೆ. ಮೂರನೇ ಅಲೆಯ ಬಗ್ಗೆ ಇನ್ನೂ ಜಿಜ್ಞಾಸೆ ವೈದ್ಯಕೀಯ ಸಮೂಹ, ವಿಜ್ಞಾನಿಗಳು, ತಜ್ಞರ ನಡುವೆ ಇದೆ. ಎರಡನೇ ಅಲೆಯಲ್ಲಿ ಮಾಡಿಫಿಕೇಶನ್, ವೇರಿಯಂಟ್ಸ್ ಕಾರಣದಿಂದ ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ. ಬೆಂಗಳೂರಿನಲ್ಲಿ ಬೆಡ್ ಹಗರಣ, ರಾಜಕೀಯದ ನಡುವೆಯೂ ಇಂದು ಸೋಂಕಿತರಿಗೆ ಕೊಂಚ ಮಟ್ಟದ ನಿರಾಳತೆ ದೊರೆತಿದೆ. ಹಾಸಿಗೆಗಳು ಹೆಚ್ಚು ಪ್ರಮಾಣದಲ್ಲಿ ದೊರೆಯುವಂತಾಗಿದೆ. ಇನ್ನೂ 2 ವರ್ಷಗಳ ವರೆಗೆ ಸೋಷಿಯಲ್ ವ್ಯಾಕ್ಸಿನ್, ಬಯೋಲಾಜಿಕಲ್ ವ್ಯಾಕ್ಸಿನ್ ಅಗತ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯ. ಇದರಲ್ಲಿ ಎಡವಬಾರದು ಎಂದು ಸಂತೋಷ್ ಜಿ ತಿಳಿಸಿದರು.
ದೇಶದಲ್ಲಿ ಒಂದು ರೀತಿಯ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಸಾಮಾನ್ಯರ ಬದುಕು ಸ್ಥಿತ್ಯಂತರವಾಗಿದೆ ಎಂಬುದು ಸುಳ್ಳಲ್ಲ. ರಾಜಕೀಯವನ್ನು ಲಾಭಿಯ ರೀತಿಯಲ್ಲಿ ನೋಡದೆ, ದಿವಾಳಿತನದ ಹಿನ್ನೆಲೆಯಲ್ಲಿ ನೋಡಬೇಕಿದೆ. ಸರ್ಕಾರದ ನಿರ್ಲಕ್ಷ್ಯ ಕೊರೋನಾ ಹರಡಲು ಕಾರಣ ಎಂಬ ಆರೋಪಗಳನ್ನು ವಿಪಕ್ಷಗಳು, ಬುದ್ಧಿಜೀವಿಗಳು ಹೇರಿದರು. ಆದರೆ ಅದರಲ್ಲಿ ಹುರುಳಿಲ್ಲ. ಏಕೆಂದರೆ ಎಲೆಕ್ಷನ್ ರ್ಯಾಲಿ ಹೊರತಾದಂತೆ ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮ ಇರದಿದ್ದರೂ ಸೋಂಕು ಏರಿಕೆಯಾಯಿತು. ನವದೆಹಲಿ, ಚತ್ತೀಸ್ಘಡಗಳಲ್ಲೂ ಯಾವುದೇ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮಗಳಿರಲಿಲ್ಲ. ಆದರೂ ಅಲ್ಲೆಲ್ಲಾ ಹೆಚ್ಚಿತು. ಈ ವೈಜ್ಞಾನಿಕ ತರ್ಕದ ನಡುವೆ ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ್ಯಾಲಿ, ಕುಂಭಮೇಳದಿಂದ ಹರಡಿತು ಎಂಬ ವಾದ ಹುರುಳಿಲ್ಲದ್ದು ಎಂಬುದಕ್ಕೆ ಇದು ಸಾಕ್ಷಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾಯಿಲೆಯನ್ನು 15 ದಿನಕ್ಕೆ ಹೆಚ್ಚು ಪ್ರಿಡಿಕ್ಟ್ ಮಾಡಲು ಅಸಾಧ್ಯ ಎಂದು ತಜ್ಞರು ಹೇಳಿದ್ದಾರೆ. ಇದರ ಚಿಕಿತ್ಸೆಗೆ ಮೆಡಿಕಲ್ ಆಕ್ಸಿಜನ್ ತಯಾರಿಗೆ ಕೇಂದ್ರ ಸರ್ಕಾರ ಅಗತ್ಯ ನೆರವು, ಬೆಂಬಲ ನೀಡಿದೆ. ಕಳೆದ ಸೆಪ್ಟೆಂಬರ್ನಲ್ಲೇ ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸೂಚಿಸಿತ್ತು. ಪಿಎಂ ಕೇರ್ಸ್ ವತಿಯಿಂದ 156 ಆಕ್ಸಿಜನ್ ಪ್ಲಾಂಟ್ ಅಲಾಟ್ ಮಾಡಲಾಯಿತು. ಆದರೆ ಕೆಲ ರಾಜ್ಯಗಳು ಇದ್ಯಾವುದನ್ನೂ ಸರಿಯಾಗಿ ಕಾರ್ಯರೂಪಕ್ಕೆ ತರಲಿಲ್ಲ. ದೆಹಲಿಯಲ್ಲಿಯೂ ಈ ಯಾವ ಕ್ರಮಗಳೂ ಸರಿಯಾಗಿ ವ್ಯವಸ್ಥೆ ಮಾಡಲಿಲ್ಲ. ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಹೇಳಿದರು.
ನಮ್ಮಲ್ಲಿ ಹೆಚ್ಚು ಕರ್ತವ್ಯ ಪರತೆ ಯಿಂದ ಕೆಲಸ ಮಾಡುವ ವೈದ್ಯಕೀಯ ತಜ್ಞರು, ವಿಜ್ಞಾನಿಗಳು ಸೇರಿದಂತೆ ಇನ್ನಿತರರಿರುವುದು ನಮ್ಮ ಹೆಮ್ಮೆ. ಇದಕ್ಕೆ ಸಾಕ್ಷಿ ಈ ಎರಡನೇ ಅಲೆಯ ಸಂದರ್ಭದಲ್ಲಿ ನಮ್ಮಲ್ಲಿ ಹಾಸಿಗೆ, ಆಕ್ಸಿಜನ್ ಕೊರತೆ ಹೊರತಾಗಿ, ಪಿಪಿಇ ಕಿಟ್ಗಳು, ಮಾಸ್ಕ್, ಗ್ಲೌಸ್ ಇತ್ಯಾದಿ ಅಗತ್ಯ ವಸ್ತುಗಳ, ಕಳೆದ ಒಂದನೇ ಅಲೆಯಲ್ಲಿ ಅಗತ್ಯ ಎನಿಸಿದ್ದ ವಸ್ತುಗಳ ಕೊರತೆ ಕಂಡು ಬಂದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಆರ್ ಟಿಪಿಸಿಆರ್ ಸೇರಿದಂತೆ ಇನ್ನಿತರ ವಿಚಾರಗಳಲ್ಲೂ ನಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ. ಜಗತ್ತಿನ ಹಲವು ದೇಶಗಳಿಗೆ ನಾವದನ್ನು ರಫ್ತು ಮಾಡುವ ಮಟ್ಟಿಗೆ.ನಮ್ಮ ಸಾಮರ್ಥ್ಯ ಬೆಳೆದಿದೆ. ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಈ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಿರುವುದನ್ನೂ ನಾವಿಲ್ಲಿ ಗಮನಿಸಬಹುದು. ಹಾಗೆಯೇ ವೆಂಟಿಲೇಟರ್ ಬೆಡ್ಗಳ ಸಂಖ್ಯೆಯೂ ಇಂದು ಹೆಚ್ಚಾಗಿದೆ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಐಸಿಯು ಬೆಡ್, ವೆಂಟಿಲೇಟರ್ಗಳು ಕೊರತೆಯಾಗುತ್ತಿವೆ. ಇದನ್ನು ನಿವಾರಿಸಲು ಎಲ್ಲಾ ಸರ್ಕಾರಗಳು ಸಹ ಕೆಲಸ ಮಾಡುತ್ತಿವೆ. ಆದರೆ ಇದನ್ನು ಸರ್ಕಾರಗಳ ದೌರ್ಬಲ್ಯ ಎಂದು ರಾಜಕೀಯ ಹೇಳಿಕೆಗಳನ್ನು ನೀಡುವುದು, ಅಪಾದಿಸುವುದು ಸರಿಯಲ್ಲ. ಕೇಂದ್ರ ನೀಡಿದ ವೆಂಟಿಲೇಟರ್ಗಳನ್ನು ತೆರೆಯದೆಯೇ ಅದನ್ನು ಸರಿ ಇಲ್ಲ ಎಂದು ದೂರುತ್ತಾರೆ. ಇದೆಲ್ಲಾ ಸುಳ್ಳು. ದೇಶದಲ್ಲಿ ವೈದ್ಯಕೀಯ ಸೌಲಭ್ಯ ತಯಾರಿಸುವ, ಕೊರೋನಾ ಲಸಿಕೆ, ಔಷಧ ತಯಾರಿಯಲ್ಲಿ ಭಾರತ ದೇಶ ಸಶಕ್ತವಾಗಿದೆ ಎಂಬುದು ನಮ್ಮ ಆತ್ಮನಿರ್ಭರತೆಯ ಶಕ್ತಿಯ ಸಾಕ್ಷಿಯಾಗಿದೆ ಎಂದರು.
ನಮ್ಮ ಶವ ಸಂಸ್ಕಾರಕ್ಕಾದರೂ ಜಾಗವಿದೆ. ಆದರೆ ಅಮೆರಿಕ ಸೇರಿದಂತೆ ಇನ್ನೂ ಹಲವು ಮುಂದುವರಿದ ದೇಶಗಳಲ್ಲಿ ಹೆಣಗಳು ಫ್ರೀಜರ್ನಲ್ಲಿ ಕೊಳೆಯುವಂತಾಗಿದೆ ಎಂಬುದು ದುರಂತ. ಹೌದು ನಮ್ಮಲ್ಲಿಯೂ ರೆಮ್ಡೆಸಿವಿರ್ ಸೇರಿದಂತೆ ಇನ್ನಿತರ ಔಷಧಗಳ ಕೊರತೆ ಬಂತು. ಇದು ಸಾಮಾನ್ಯ. ದಿನನಿತ್ಯ ಲಕ್ಷ ಲಕ್ಷ ಸೋಂಕಿತರು ಹೆಚ್ಚಾಗುವಾಗ ಈ ಕೊರತೆ ಉಂಟಾಗುವುದು ಸಹಜ. ಆದರೆ ಸದ್ಯ ಇದರ ಉತ್ಪಾದನೆ ಹೆಚ್ಚಾಗಿದೆ ಎಂಬುದು ಸಂತಸದ ವಿಚಾರ. ಕೆಲ ಕಡೆಗಳಲ್ಲಿ ಅಕ್ರಮ ಕಾಳಸಂತೆಯ ಕಾರಣದಿಂದ ಕೊರತೆ ಉಂಟಾಗುತ್ತಿದೆ. ಇದಕ್ಕೂ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ನಮ್ಮಲ್ಲಿ ಸುಮಾರು 35 ಕ್ಕೂ ಹೆಚ್ಚು ಔಷಧಿ ತಯಾರಕ ಸಂಸ್ಥೆಗಳು ರೆಮಿಸಿಡ್ವಿರ್ ಸೇರಿದಂತೆ ಇನ್ನಿತರ ಔಷಧಗಳನ್ನು ತಯಾರಿಸುತ್ತಿರುವುದನ್ನು ನಾವು ಗಮನಿಸಬೇಕು ಎಂದು ತಿಳಿಸಿದರು.
ಸದ್ಯ ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿಯೂ ಬ್ಲ್ಯಾಕ್ ಫಂಗಸ್ ಸೋಂಕಿನ ಸಮಸ್ಯೆ ಆಗಿದೆ. ಇದಕ್ಕೆ ಪೂರಕ ಔಷಧವನ್ನು ಜೂನ್ ನಿಂದ 5 ಸಂಸ್ಥೆಗಳು ನಮ್ಮಲ್ಲಿ ತಯಾರಿಸಲಿವೆ. ಇದನ್ನು ಹೆಚ್ಚು ಕುಶಲತೆ ಹೊಂದಿದವರಷ್ಟೇ ತಯಾರಿಸಬಹುದಾಗಿದೆ. ಇದಕ್ಕೂ ಕೇಂದ್ರ ಕ್ರಮ ಕೈಗೊಳ್ಳುತ್ತಿದೆ. ಇನ್ನು ಆಕ್ಸಿಜನ್ ಸಂಬಂಧಿಸಿದಂತೆ ಸಹ ರಾಜಕೀಯ ವಿರೋಧಿಗಳ ಹೇಳಿಕೆಗಳನ್ನು ನಾವು ಗಮನಿಸಬಹುದು. ಇದಕ್ಕೆ ಕಾರಣ ಅಗತ್ಯಕ್ಕಿಂತ ಹೆಚ್ಚು ಆಕ್ಸಿಜನ್ ಬಳಕೆ. ಆದರೆ ಸದ್ಯ ಆಕ್ಸಿಜನ್ ತಯಾರಿಕಾ ಪ್ರಮಾಣವನ್ನು ನಮ್ಮಲ್ಲಿ ಹೆಚ್ಚಿಸಲಾಗಿದೆ. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಾಗಾಟಕ್ಕೆ ರೈಲುಗಳನ್ನು ಓಡಾಡಿಸುವ ವ್ಯವಸ್ಥೆ ಪ್ರಧಾನಿ ಮೋದಿ ಸರ್ಕಾರ ಮಾಡಿದೆ. ಇಂದು ಕೊರತೆ ಇದೆ. ಆದರೆ ಆಹಾಕಾರ ಆಗದಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಆಕ್ಸಿಜನ್ ಸಿಲಿಂಡರ್ಗಳನ್ನು ಸಹ ಕೇಂದ್ರ ಅನೇಕ ರಾಜ್ಯಗಳಿಗೆ ನೀಡಿದೆ. ವ್ಯಾಕ್ಸಿನ್ ಮೈತ್ರಿ ಕಾರಣಕ್ಕೆ ವಿದೇಶಗಳಿಂದಲೂ ಆಕ್ಸಿಜನ್ ದೊರೆಯಿತು. 1594 ಆಕ್ಸಿಜನ್ ಪ್ಲಾಂಟ್ಗಳನ್ನು ದೇಶದೆಲ್ಲೆಡೆ ತಲುಪಿಸಲಾಯಿತು. ವಿದೇಶದಿಂದ ಆಕ್ಸಿಜನ್ ಏರ್ಲಿಫ್ಟ್ ಮಾಡುವ ಕೆಲಸ ಕೇಂದ್ರ ಸರ್ಕಾರದಿಂದಾಗಿದೆ. ತನ್ನಲ್ಲಿ ಸಾಧ್ಯವಿರುವ ಎಲ್ಲಾ ಕೆಲಸಗಳನ್ನು ಸಹ ಕೇಂದ್ರ ಸರ್ಕಾರ ಮಾಡಿದೆ ಎಂಬುದು ನಾವು ಗಮನಿಸಬೇಕಾದ ವಿಚಾರ. ಆಸ್ಪತ್ರೆಗಳನ್ನು ಸಹ ನಿರ್ಮಾಣ ಮಾಡಲಾಗಿದೆ. ಪ್ರಯತ್ನ ಮತ್ತು ತಯಾರಿಯ ತೀವ್ರತೆತನ್ನು ನಾವಿಲ್ಲಿ ನೋಡಬಹುದು. ಹಾಗೆಂದು ಸಮಸ್ಯೆ ಇಲ್ಲ ಎಂದಲ್ಲ. ಆದರೆ ಸಮಸ್ಯೆಯ ಪ್ರಮಾಣ ಕಡಿಮೆಯಾಗಿದೆ ಎಂದು ನಾವಿದರಿಂದ ತಿಳಿಯಬಹುದು ಎಂದರು.
ಜಗತ್ತಿನ 68 ರಾಷ್ಟ್ರಗಳ ನಡುವಿನ ಕೋವ್ಯಾಕ್ಸ್ ಒಪ್ಪಂದದಂತೆ ಪುಣೆಯ ಸೆರಂ ಲಸಿಕೆ ತಯಾರಿಸುತ್ತಿದೆ. ಇದರಲ್ಲಿ 80% ಗಳಷ್ಟನ್ನು ನಮ್ಮಲ್ಲೇ ಬಳಕೆ ಮಾಡಲಾಗುತ್ತಿದೆ. ಭಾರತ್ ಬಯೋಟೆಕ್, ಐಸಿಎಂಆರ್ ಜೊತೆಗೆ ಕೈಜೋಡಿಸಿ ಲಸಿಕೆ ತಯಾರಿಸುತ್ತಿದೆ. ಈ ನಡುವೆ ಎಲ್ಲರಿಗೂ ಲಸಿಕೆ ತಯಾರಿಕೆಗೆ ಅವಕಾಶ ಕೊಡುವಂತೆ ಈ ಬಗ್ಗೆ ಮಾಹಿತಿ ಇರದವರು ಹೇಳುತ್ತಿದ್ದಾರೆ. ಆದರೆ ಇದು ಎಲ್ಲರಿಂದಲೂ ಸಾಧ್ಯವಾಗುವ ವಿಚಾರವಲ್ಲ ಎಂಬ ವಿಚಾರವನ್ನು, ವಾಸ್ತವವನ್ನು ನಾವಿಲ್ಲಿ ಅರಿಯಬೇಕು. ಬೀದಿ ಬದಿಯಲ್ಲಿ ಇದನ್ನು ತಯಾರಿಸಲು ಅಸಾಧ್ಯ ಎಂಬುದನ್ನು ನಾವು ಗಮನಿಸಬೇಕು. ಗ್ಲೋಬಲ್ ಟೆಂಡರ್ ಮಾಡಿದ ಕೂಡಲೇ ವ್ಯಾಕ್ಸಿನ್ ದೊರೆಯದು. ಆದರೆ ಕೇಂದ್ರ ಸರ್ಕಾರ ಈಗಾಗಲೇ ಟೀಕೆಗಳ ನಡುವೆಯೂ ಸ್ಪುಟ್ನಿಕ್ ವಿ ಲಸಿಕೆ ಆಮದಿಗೂ ವ್ಯವಸ್ಥೆ ಮಾಡಿದೆ. ದೊಡ್ಡ ಮಟ್ಟದಲ್ಲಿ ನಮ್ಮ ದೇಶದಲ್ಲಿ ಲಭ್ಯವಿದ್ದ ಲಸಿಕೆಗನುಗುಣವಾಗಿ ಕೊರೋನಾ ವಾರಿಯರ್ಸ್ಗೆ ಲಸಿಕೆ ಒದಗಿಸಲಾಯಿತು. ಎರಡನೇ ಹಂತದಲ್ಲಿ ಫ್ರಂಟ್ಲೈನ್ ವರ್ಕರ್ಸ್ಗೆ ಲಸಿಕೆ ನೀಡಲಾಯಿತು. ಇದರಿಂದ ಇಂದು ಚಿಕಿತ್ಸೆಗೆ, ಕೊರೋನಾ ನಿಯಂತ್ರಣಕ್ಕೆ ನಮ್ಮಲ್ಲಿ ಜನರಿದ್ದಾರೆ ಎಂಬುದನ್ನು ಗಮನಿಸಬೇಕು. ಇಂದು ವ್ಯಾಕ್ಸಿನ್ ಕೊರತೆ ಇದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ತಯಾರಿಕಾ ಸಂಸ್ಥೆಗಳು ಶ್ರಮಿಸುತ್ತಿವೆ ಎಂಬುದನ್ನು ಗಮನಿಸಬೇಕು. ಇದೆಲ್ಲವನ್ನೂ ಸಂಸ್ಥೆಗಳು ಸ್ವಯಂ ರಿಸ್ಕ್ ತೆಗೆದುಕೊಂಡು ಉತ್ಪಾದನೆ ಮಾಡುತ್ತಿವೆ ಎಂಬುದನ್ನು ನಾವು ಗಮನಿಸಬೇಕು. ಈ ಪ್ರೊಡಕ್ಷನ್ ವೇಗಕ್ಕನುಗುಣವಾಗಿ ನಮ್ಮ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ನಮ್ಮಲ್ಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ತಯಾರಿಕೆಯೂ ನಡೆಯುತ್ತಿದೆ. ಹಾಗೆಯೇ ರಷ್ಯಾದಿಂದಲೂ ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ಬರಲಿದೆ ಎಂದು ತಿಳಿಸಿದ್ದಾರೆ. ಆದ್ಯತೆಗೆ ಅನುಗುಣವಾಗಿ ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳೂ ಲಸಿಕೆ ನೀಡುತ್ತಿವೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.
ಜಗತ್ತಿನ ಹಲವು ರಾಷ್ಟ್ರಗಳಿಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ಆದರೆ ನಮ್ಮಲ್ಲಿ ದೊರೆತಿದೆ ಎಂಬುದು ಗಮನಾರ್ಹ. ಅಂತಾರಾಷ್ಟ್ರೀಯ ಕಾನೂನಿನನ್ವಯವೇ ನಮ್ಮ ದೇಶ ನಡೆಯುತ್ತದೆ ಎಂಬುದನ್ನು ನಾವು ಗಮನಿಸಬೇಕು. 95 ದೇಶಗಳಿಗೆ ನಾವು ಲಸಿಕೆ ಕಳುಹಿಸಿದ್ದೇವೆ. 1 ಕೋಟಿ ಲಸಿಕೆಗಳನ್ನು ಉಚಿತವಾಗಿ ಕೊಟ್ಟಿದ್ದೇವೆ. ಇದೆಲ್ಲ ಅಂತರಾಷ್ಟ್ರೀಯ ಒಪ್ಪಂದ ಎಂಬುದು ನಮ್ಮ ಗಮನದಲ್ಲಿರಬೇಕು. ಕಾರಣವಿಲ್ಲದೆ ಜನರ ದಾರಿ ತಪ್ಪಿಸಬಾರದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸುಳ್ಳು ಸುದ್ದಿಗಳನ್ನು ಹಬ್ಬುವ ಕಾಂಗ್ರೆಸ್ ನಾಯಕರು, ಬೇರೆ ರಾಜಕೀಯ ಪಕ್ಷಗಳು ಇದನ್ನು ಗಮನಿಸಬೇಕು. ಕೋವ್ಯಾಕ್ಸಿನ್ ಜಗತ್ತಿನ ಅತಿ ಹೆಚ್ಚು ಸಶಕ್ತ ಲಸಿಕೆ ಎಂಬುದು ಸಾಬೀತಾಗಿದೆ ಎಂಬುದು ಈ ಅಪಪ್ರಚಾರ ಮಾಡುವವರಿಗೆ ತಕ್ಕ ಉತ್ತರವೇ ಸರಿ. ಇಂತಹ ಬೇಜವಾಬ್ದಾರಿಯುತ ರಾಜಕಾರಣ, ರಾಜಕಾರಣಿಗಳು ಕೊರೋನಾ ಸಂದರ್ಭದಲ್ಲಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಪಿಎಂ ಕೇರ್ಸ್ನ ಡೊನೇಶನ್ ಬಳಸಿ ಅಗತ್ಯ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತಿವೆ ಎಂಬುದನ್ನು ನಾವು ಗಮನಿಸಬೇಕು ಎಂದು ತಿಳಿಸಿದರು.
ಕೈಜೋಡಿಸಿ ಕೆಲಸಮಾಡುವ ಬದಲು ಟೂಲ್ಕಿಟ್ ನ ಮೂಲಕ ಎಲ್ಲಾ ಸರ್ಕಾರಗಳನ್ನು ವಿರೋಧಿಸುವ ಕೆಲಸವನ್ನು ವಿರೋಧಿಗಳು ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿ ದೊರೆತಿದೆ. 1 ವರ್ಷದಲ್ಲಿ ನಮ್ಮ ದೇಶದ ಎಲ್ಲರಿಗೂ ಲಸಿಕೆ ದೊರೆಯುತ್ತದೆ ಎಂಬುದು ನಾವು ಸಶಕ್ತರಾಗಿರುವುದಕ್ಕೆ ಸಾಕ್ಷಿಯಲ್ಲವೇ. ಹಲವು ಸೋಂಕುಗಳಿಗೆ ಲಸಿಕೆ ಪಡೆಯಲು 80 ವರ್ಷಗಳೇ ಬೇಕಾಗಿದ್ದ ನಮ್ಮ ದೇಶದಲ್ಲಿ ಒಂದೂವರೆ ವರ್ಷದಲ್ಲಿಯೇ ಕೊರೋನಾ ಲಸಿಕೆ ನಮ್ಮಲ್ಲಿ ಬಂದಿದೆ ಎಂಬುದನ್ನು ನಾವು ಗಮನಿಸಬೇಕು ಎಂದರು.
ಕೊರೋನಾ ಪರಿಸ್ಥಿತಿ ದಾರುಣವಾಗಿದೆ. ಆದರೆ ಜಗತ್ತಿನಲ್ಲೇ ನಮ್ಮ ದೇಶದಲ್ಲಿ ಕೊರೋನಾ ಪರಿಸ್ಥಿತಿ ಕೊಂಚ ಕಡಿಮೆ. ಇಲ್ಲಿ ಮಾನವೀಯತೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ವೈದ್ಯರಾದಿಯಾಗಿ ಎಲ್ಲರೂ. ಈ ಎಲ್ಲಾ ಬಗ್ಗೆಯೂ ನಾವು ನಿಷ್ಕಲ್ಮಶವಾಗಿ ಆಲೋಚಿಸಬೇಕಿದೆ. ಇಲ್ಲಿ ಸಾಮೂಹಿಕ ಸಹಭಾಗಿತ್ವಕ್ಕೆ, ಮಾನವೀಯತೆಗೆ ನಾವು ಬೆಲೆ ಕೊಡಬೇಕಿದೆ. ಎಲ್ಲರೂ ಒಟ್ಟಾಗಿ ಕೈಜೋಡಿಸಬೇಕು. ಹುಳುಕು ಹುಡುಕುವ ಕೆಲಸವನ್ನು ಮಾಡಬಾರದು. ಕೆಲವು ರಾಜಕಾರಣಿಗಳು, ಮಾಧ್ಯಮಗಳು ಕೇವಲ ದೂಷಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಾಗಾಗಿ ಇಂತಹ ಆರ್ಥಿಕ ಸಂಕಷ್ಟ, ಆರೋಗ್ಯ ಸಂಕಷ್ಟದ ನಡುವೆಯೂ ನಾವು ಸರ್ಕಾರದ ಜೊತೆಗೆ, ಕೇಂದ್ರ ಸರ್ಕಾರದ ಜೊತೆಗೆ ಕೈಜೋಡಿಸಬೇಕಾದ ಅಗತ್ಯ ಇದೆ. ಕೊರೋನಾ ಸೋಂಕಿನ ಸಂದರ್ಭದಲ್ಲಿ ಬದುಕನ್ನು ಪಣಕ್ಕಿಟ್ಟು ಕೆಲಸ ಮಾಡುವವರ ಜೊತೆ ನಾವು ಕೈಜೋಡಿಸಬೇಕು. ತಪ್ಪುಗಳಿಗೆ ಪರಿಹಾರ ಹುಡುಕಬೇಕು. ಆದರೆ ಟೀಕಿಸುವುದನ್ನೇ ಬದುಕಾಗಿಸಿಕೊಳ್ಳಬಾರದು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಸಂತೋಷ್ ಜಿ ಹೇಳಿದರು.
ಮಾಧ್ಯಮಗಳು ಹೇಳುವುದೆಲ್ಲ ಸತ್ಯವಲ್ಲ. ಮಾಹಿತಿಗಳ ಅತಿ ಪ್ರವಾಹ ಮಾಹಿತಿಯಲ್ಲಿ ಸತ್ಯ ಕಂಡುಕೊಂಡು ವ್ಯವಹರಿಸುವ ಮನಸ್ಸು ನಮ್ಮದಾಗಬೇಕು ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.