ಬೆಂಗಳೂರು: ಮೈಸೂರು – ಬೆಂಗಳೂರು ಎಕ್ಸ್ಪ್ರೆಸ್ ವೇ ಎಂದೇ ಜನಜನಿತವಾಗಿರುವ ಮೈಸೂರು- ಬೆಂಗಳೂರು ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್ನ 55% ಗಳಷ್ಟು ಕೆಲಸಗಳು ಸಂಪೂರ್ಣವಾಗಿದ್ದು, ಇದನ್ನು 2022 ರ ಫೆಬ್ರವರಿ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
2022 ರ ಸೆಪ್ಟೆಂಬರ್ ತಿಂಗಳಿಗೆ ಈ ಯೋಜನೆ ಪೂರ್ಣಗೊಳ್ಳಲು ಸಮಯ ನಿಗದಿ ಮಾಡಲಾಗಿದೆ. ಆದರೆ ನಿಗದಿತ ಅವಧಿಗೂ ಮೊದಲೇ ಈ ಯೋಜನೆ ಸಂಪೂರ್ಣಗೊಳ್ಳಲಿದೆ, ಲೋಕಾರ್ಪಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಭಾರತ್ಮಾಲಾ ಪರಿಯೋಜನೆಯ 1 ನೇ ಹಂತದಡಿಯಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಎರಡು ಪ್ಯಾಕೇಜ್ಗಳನ್ನು ಬಳಸಿ 7400 ಕೋಟಿ ರೂ. ಗಳಲ್ಲಿ ಈ ಯೋಜನೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಮದ್ದೂರು ತಾಲೂಕಿನ ನಿಡ್ಲಘಟ್ಟದ ವರೆಗೆ ಸುಮಾರು 3000 ಕೋಟಿ ರೂ. ಗಳಲ್ಲಿ ಮೊದಲ ಹಂತ ಮತ್ತು ನಿಡ್ಲಘಟ್ಟದಿಂದ ಮೈಸೂರಿನ ವರೆಗೆ 3400 ಕೋಟಿ ರೂ.ಗಳಲ್ಲಿ ಎರಡನೇ ಹಂತದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ.
ಈ ಕಾಮಗಾರಿಯ ಗುತ್ತಿಗೆಯನ್ನು ಭೋಪಾಲ್ ಮೂಲದ ದಿಲೀಪ್ ಬಿಲ್ಡ್ಕಾನ್ಗೆ ವಹಿಸಲಾಗಿದೆ. ಮುಂದಿನ 11 ತಿಂಗಳಲ್ಲಿ ಈ ಕಾಮಗಾರಿ ಸಂಪೂರ್ಣವಾಗಲಿದ್ದು, ವಿಶ್ವಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಈ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸಮರೋಪಾದಿಯಲ್ಲಿ ಈ ಯೋಜನೆಯ ಕಾರ್ಯಗಳು ನಡೆಯುತ್ತಿದೆ ಎಂದು ಕಾರಜೋಳ ಹೇಳಿದ್ದಾರೆ.
ಈಗಾಗಲೇ ಮೊದ ಪ್ಯಾಕೇಜ್ನ 67.5% ಮತ್ತು ಎರಡನೇ ಪ್ಯಾಕೇಜ್ನ 50.5% ಗಳಷ್ಟು ಕಾಮಗಾರಿ ಮುಗಿದಿದೆ. ಈ ಯೋಜನೆ ಸಂಪೂರ್ಣಗೊಂಡು ಲೋಕಾರ್ಪಣೆಯಾದ ಬಳಿಕ ಎರಡು ನಗರಗಳ ನಡುವಿನ ಸಂಚಾರಕ್ಕೆ 90 ನಿಮಿಷಗಳು ಸಾಕಾಗಲಿವೆ. ಇದರಲ್ಲಿ ಒಂಬತ್ತು ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು, 4 ಓವರ್ ಬ್ರಿಡ್ಜ್ಗಳು ಸೇರಿವೆ ಎಂದು ಡಿಸಿಎಂ ತಿಳಿಸಿದ್ದಾರೆ. ಹಾಗೆಯೇ ಬೆಂಗಳೂರು ಹೊರವಲಯದಲ್ಲಿ 5 ಕಿಮೀ, ಮದ್ದೂರಿನಲ್ಲಿ 3 ಕಿಮೀ, ಶ್ರೀರಂಗಪಟ್ಟಣದಲ್ಲಿ ಎತ್ತರದ ಕಾರಿಡಾರ್ಗಳ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.
ರಸ್ತೆ ಕಾಮಗಾರಿ ಸಂಪೂರ್ಣವಾದ ಬಳಿಕ ಟೋಲ್ಗಳ ಬಗ್ಗೆ ನಿರ್ಧರಿಸಲಾಗುತ್ತದೆ. ಇದು ಗ್ರಾಮಸ್ಥರ ಸಂಚಾರಕ್ಕೂ ಅನುಕೂಲ ಒದಗಿಸಲಿದೆ ಎಂದು ಕಾರಜೋಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.