ಬೆಂಗಳೂರು: ಜನೌಷಧ ಕೇಂದ್ರಗಳಿಗೆ ಔಷಧ ಪೂರೈಕೆಯನ್ನು ಇನ್ನಷ್ಟು ತ್ವರಿತಗೊಳಿಸಲು ರಾಜ್ಯದಲ್ಲಿ ಇನ್ನೂ ಎರಡು ವಿತರಣಾ ಕೇಂದ್ರಗಳಿಗೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ. ವಿ. ಸದಾನಂದ ಗೌಡ ಅವರು ಹೇಳಿದರು.
ಬೆಂಗಳೂರಿನಲ್ಲಿ ಜನೌಷಧ ಕೇಂದ್ರಗಳನ್ನು ನಡೆಸುತ್ತಿರುವವರ ಜೊತೆಗೆ ಸಭೆ ನಡೆಸಿ ಕುಂದು-ಕೊರತೆ, ಬೇಡಿಕೆಯನ್ನು ಆಲಿಸಿದರು. ರಾಜ್ಯದಲ್ಲಿ ಜನೌಷಧ ಸರಬರಾಜು ಮತ್ತು ಮಾರಾಟದ ವ್ಯವಸ್ಥೆ ಬಲಪಡಿಸಲು, ಜನೌಷಧ ಬಳಕೆಯನ್ನು ಜನಪ್ರಿಯಗೊಳಿಸುವ ಬಗ್ಗೆ ಮುಕ್ತ ಚರ್ಚೆ ನಡೆಸಿದರು.
ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಜನೌಷಧ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ ಹುಬ್ಬಳ್ಳಿಯಲ್ಲಿ ಜನೌಷಧ ವಿತರಣಾ ಕೇಂದ್ರ ಆರಂಭಿಸಲು ಲೈಸನ್ಸ್ ನೀಡಲಾಗಿದ್ದು, ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಹಾಗೆಯೇ ಕಲ್ಯಾಣ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ವಿತರಣಾ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಹೇಳಿದರು.
ಶ್ರೀಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧ ಪೂರೈಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕಳಕಳಿ. ಮೋದಿಯವರ ಸರ್ಕಾರ ಬಂದಾಗಿನಿಂದ ದೇಶಾದ್ಯಂತ 7,000ಕ್ಕಿಂತ ಹೆಚ್ಚು ಜನೌಷಧ ಕೇಂದ್ರಗಳನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ 849 ಜನೌಷಧ ಅಂಗಡಿಗಳನ್ನು ತೆರೆಯಲಾಗಿದ್ದು ಈ ವರ್ಷ 125 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಯುತ್ತಿದೆ. ನಾಡಿನ ಮೂಲೆಮೂಲೆಯಲ್ಲಿಯೂ ಜನೌಷಧವನ್ನು ಜನಪ್ರಿಯಗೊಳಿಸಬೇಕಿದೆ. ಸರ್ಕಾರಿ ಆಸ್ಪತ್ರೆ ಇರುವಲ್ಲೆಲ್ಲ ಜನೌಷಧಿ ಕೇಂದ್ರ ಇರಬೇಕು ಎಂಬುದು ನಮ್ಮ ಉದ್ದೇಶ. ಕನಿಷ್ಠ ಪಕ್ಷ ಸರ್ಕಾರಿ ವೈದ್ಯರಾದರೂ ಬ್ರಾಂಡೆಡ್ ಔಷಧಗಳ ಬದಲಿಗೆ ಜನೌಷಧಯನ್ನೇ ಬರೆದು ಕೊಡುವಂತಾಗಬೇಕು. ಇದರಿಂದ ಬಡವರಿಗೆ ದೊಡ್ಡಮಟ್ಟದಲ್ಲಿ ಹಣದ ಉಳಿತಾಯವಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರಗಳ ಸಹಕಾರ ಬಹುಮುಖ್ಯ. ಇವೆಲ್ಲ ವಿಷಯಗಳ ಬಗ್ಗೆ ರಾಜ್ಯ ಆರೋಗ್ಯ ಸಚಿವರುಗಳು ಹಾಗೂ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.
ಜನೌಷಧ ಅಂಗಡಿಗಳಲ್ಲಿ ಕೈಗೆಟಕುವ ದರಗಳಲ್ಲಿ ಆಯುರ್ವೇದ ಔಷಧಗಳನ್ನು ಲಭ್ಯವಾಗಿಸುವ ಬಗ್ಗೆ ಈಗಾಗಲೇ ತೀರ್ಮಾನಿಸಲಾಗಿದೆ. ಆರಂಭಿಕವಾಗಿ ಸುಮಾರು 250 ನಮೂನೆಯ ಔಷಧಗಳನ್ನು ಗುರುತಿಸಲಾಗಿದೆ. ಆದರೆ ಜನೌಷಧ ಕೇಂದ್ರಗಳಲ್ಲಿ ಜಾನುವಾರು ಔಷಧಗಳನ್ನು ಕೂಡಾ ಪೂರೈಸಬೇಕೆಂಬ ಬೇಡಿಕೆ ಬಗ್ಗೆ ಮುಂಬರುವ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಇದುವರೆಗೆ 849 ಜನೌಷಧಿ ಅಂಗಡಿಗಳನ್ನು ತೆರೆಯಲಾಗಿದ್ದು ಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧ ಪೂರೈಸಲಾಗುತ್ತಿದೆ.
ಬೆಂಗಳೂರಿನಲ್ಲಿ ಇಂದು ಜನೌಷಧಿ ಅಂಗಡಿಕಾರರೊಂದಿಗೆ ಸಭೆ ನಡೆಸಿ ಅವರ ಕುಂದು-ಕೊರತೆ, ಬೇಡಿಕೆಯನ್ನು ಆಲಿಸಿದೆ. ಜನೌಷಧಿ ವ್ಯವಸ್ಥೆ ಬಲಪಡಿಸಲು ಅವರು ಅಮೂಲ್ಯ ಸಲಹೆಗಳನ್ನೂ ನೀಡಿದ್ದಾರೆ pic.twitter.com/M68NtleCnx— Sadananda Gowda (@DVSadanandGowda) February 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.