ಬೆಂಗಳೂರು: ನಕಲಿ ಜಾತಿ ಪ್ರಮಾಣಪತ್ರ ಬಳಸಿಕೊಂಡು ಸರ್ಕಾರಿ ನೌಕರಿ, ಸೌಲಭ್ಯಗಳನ್ನು ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ನಿಯಮವೊಂದನ್ನು ರೂಪಿಸಿದೆ.
ಮುಂದಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ನೇಮಕಾತಿಯ ಸಂದರ್ಭದಲ್ಲಿ ಅಭ್ಯರ್ಥಿಗೆ ಸಂಬಂಧಿಸಿದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ಇ) ವು ವಿಚಾರಣಾ ವರದಿಯನ್ನು ನೀಡಿದ ಬಳಿಕವೇ ಜಾತಿ ಸಿಂಧುತ್ವ ಪ್ರಮಾಣಪತ್ರ ವಿತರಣೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಸೂಚಿಸಿದೆ.
ಸುಪ್ರೀಂ ಕೋರ್ಟ್ 2019 ರಲ್ಲಿಯೇ ಜಾತಿ ಪರಿಶೀಲನಾ ಸಮಿತಿಗಳು ಜಾಗೃತ ಕೋಶದಿಂದ ವರದಿ ಪಡೆದ ಬಳಿಕವೇ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡಬೇಕೆಂದು ತೀರ್ಪಿತ್ತಿದೆ. ಆದರೂ ಈ ಆದೇಶ ಸರಿಯಾದ ರೀತಿಯಲ್ಲಿ ಪಾಲನೆಯಾಗುವುದು ಮಾತ್ರ ಕಾಣುತ್ತಿಲ್ಲ. ನಕಲಿ ಜಾತಿ ಪ್ರಮಾಣ ಪತ್ರಗಳಿಂದಾಗಿ ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕಾದ ನಿಜವಾದ ಅಭ್ಯರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಅವರು ಅವಕಾಶ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಜಾರಿಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಡಿಸಿಆರ್ಇ ಮುದ್ರೆಯೊತ್ತಿದ ಬಳಿಕವೇ ಜಾತಿ ಪ್ರಮಾಣಪತ್ರ ನೀಡುವಂತೆಯೂ ಸೂಚಿಸಲಾಗಿದೆ.
ಯಾವುದೇ ಜಾತಿಯ ಬಗ್ಗೆ ಅನುಮಾನ ವ್ಯಕ್ತವಾದರೂ ಡಿಸಿಆರ್ಇಗೆ ಶಿಫಾರಸ್ಸು ಮಾಡುವಂತೆ ಮತ್ತು ಮಾಹಿತಿಯನ್ನು ಪಡೆದುಕೊಳ್ಳುವಂತೆಯೂ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ಅಥವಾ ಜಾತಿ ಪರಿಶೀಲನಾ ಸಮಿತಿಗಳಿಂದ ಸ್ವೀಕೃತವಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ತಿಂಗಳೊಳಗಾಗಿ ವಿಚಾರಣೆ ಮುಗಿಸಿ ವರದಿ ನೀಡುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಅರ್ಹರಿಗೆ ಸರ್ಕಾರದ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸುವ ನಿಟ್ಟಿನಲ್ಲಿ ಈ ಆದೇಶವನ್ನು ಹೊರಡಿಸಿರುವುದಾಗಿಯೂ ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.