ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್ 2020ರ ಎರಡನೇ ದಿನವಾದ ಇಂದು ಒಟ್ಟು ಎಂಟು ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ, ಐಟಿ-ಬಿಟಿ ಸಚಿವ ಡಾ ಸಿ. ಎನ್. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈಬರ್ ಭದ್ರತೆ, ದತ್ತಾಂಶ ವಿಜ್ಞಾನ, ಸೆಮಿಕಂಡಕ್ಟರ್ಗಳ ಬಗ್ಗೆ ಅಧ್ಯಯನ, ಕೃತಕ ಬುದ್ಧಿಮತ್ತೆ ಸೇರಿದಂತೆ ಒಟ್ಟು 8 ವಿಷಯಗಳಿಗ ವಿವಿಧ ದೇಶಗಳ ಸಂಸ್ಥೆಗಳು ಮತ್ತು ನಮ್ಮ ಸಂಸ್ಥೆಗಳ ಸಮನ್ವಯದಲ್ಲಿ ಒಪ್ಪಂದ ನಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.
ಫಿನ್ಲ್ಯಾಂಡ್ ಜೊತೆಗೆ ಡೇಟ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕೇಂದ್ರ ಆರಂಭ ಮಾಡಲಿರುವುದಾಗಿಯೂ ತಿಳಿಸಿದ್ದಾರೆ. ಹಾಗೆಯೇ ಕೃಷಿ, ಸಾರಿಗೆ ಸೇವೆ, ಸೇವಾ ವಿಭಾಗ, ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಇದರಿಂದ ಹೆಚ್ಚಿನ ಅನುಕೂಲಗಳಾಗಲಿವೆ ಎಂದು ತಿಳಿಸಿದ್ದಾರೆ. ಸ್ವೀಡನ್ ರಾಷ್ಟ್ರದ ಜೊತೆಗೆ ಇಂಟರ್ನೆಟ್ ಆಫ್ ಥಿಂಗ್ಸ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಸ್ಮಾರ್ಟ್ ಸಿಟಿ, ಹೆಲ್ತ್, ಉತ್ಪಾದನಾ ವಲಯ ಮೊದಲಾದವುಗಳಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸೆಮಿಕಂಡಕ್ಟರ್ ವಿಚಾರಕ್ಕೆ ಸಂಬಂಧಿಸಿದಂತೆ ಜರ್ಮನಿ ಮತ್ತು ಯುಕೆ ಜೊತೆಗೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದು ರಕ್ಷಣಾ ಕ್ಷೇತ್ರ ಸೇರಿದಂತೆ ಹೆಚ್ಚಿನ ಕ್ಷೇತ್ರಗಳಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಅಶ್ವತ್ಥ್ ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.