ಗದಗ: ರಾಜ್ಯದ ಗದಗ ಜಿಲ್ಲೆಯ ಗಜೇಂದ್ರಗಢದ ಸ್ವಾತಂತ್ರ್ಯ ಹೋರಾಟಗಾರ, 104 ವರ್ಷದ ವೆಂಕೋಸ ಭಂಡಗೆ ಎಂಬವರು ಕೊರೋನಾವನ್ನು ಜಯಿಸಿದ್ದು, ಕೊರೋನಾ ಗೆದ್ದ ರಾಜ್ಯದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಕೊರೋನಾ ಗೆದ್ದು ಮನೆಗೆ ತೆರಳುವ ಸಂದರ್ಭದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 7 ರಂದು ಜೀವನದ ಶತ ವರ್ಷಗಳನ್ನು ಕಂಡ ವೆಂಕೋಸ ಅವರಿಗೆ ಜ್ವರದ ಲಕ್ಷಣಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಕೊರೋನಾ ಟೆಸ್ಟ್ ನಡೆಸಲಾಗಿತ್ತು. ಈ ಟೆಸ್ಟ್ನಲ್ಲಿ ಅವರ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿತ್ತು. ಈ ಸಂದರ್ಭದಲ್ಲಿ ಅವರ ಮನೆಯ ಎಲ್ಲಾ ಸದಸ್ಯರಿಗೂ ಕೊರೋನಾ ಟೆಸ್ಟ್ ನಡೆಸಲಾಗಿದ್ದು, ಅವರೆಲ್ಲರ ವರದಿ ನೆಗೆಟಿವ್ ಬಂದಿದೆ. ಕೊರೋನಾ ಪಾಸಿಟಿವ್ ಬಂದ ವೆಂಕೋಸ ಅವರನ್ನು ಅವರ ವಯಸ್ಸಿನ ಆಧಾರದ ಮೇಲೆ ಮೂರು ವಾರಗಳ ಕಾಲ ಐಸೋಲೇಷನ್ಗೆ ಒಳಪಡಿಸಿ, ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.
ಸದ್ಯ ಕೊರೋನಾ ಗೆದ್ದಿರುವ ಅವರು ಮನೆಗೆ ತೆರಳಿದ್ದಾರೆ. ಕೊರೋನಾ ಬಗ್ಗೆ ಮಾತನಾಡಿರುವ ಅವರು, ಕೊರೋನಾ ಬ್ರಿಟಿಷರಷ್ಟು ಕಠಿಣವಾಗಿಲ್ಲ ಎಂದು ತಿಳಿಸಿದ್ದಾರೆ. ಆ ಮೂಲಕ ಜನರಲ್ಲಿ ಕೊರೋನಾ ಬಗೆಗಿರುವ ಭಯವನ್ನು ನಿವಾರಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ವೈದ್ಯರ ಸಲಹೆಗಳನ್ನು, ಪೂರಕ ಚಿಕಿತ್ಸೆ ಪಡೆಯುವ ಮೂಲಕ ಕೊರೋನಾ ಗುಣಪಡಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರ ಮೊಮ್ಮಗ ಗೋಪಿ ಭಂಡಗೆ, ತಮ್ಮ ತಾತ ಕೊರೋನಾದಿಂದ ಗುಣಮುಖರಾದ ಬಳಿಕ ಇದೀಗ ಜನರಲ್ಲಿಯೂ ಕೊರೋನಾ ಭಯ ಹೋಗಲಾಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅವರು ಜನರಿಗೆ ಕೊರೋನಾ ಮಾರಣಾಂತಿಕ ರೋಗವಲ್ಲ. ಬದಲಾಗಿ ಸಾಮಾನ್ಯ ಜ್ವರದಂತೆಯೇ. ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂವಕ ಅದನ್ನು ಗುಣಪಡಿಸಿಕೊಳ್ಳಬಹುದಾಗಿದೆ ಎಂದು ಧೈರ್ಯ ತುಂಬುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ವೈದ್ಯರು, ಅನೇಕ ಮಂದಿ ವೃದ್ಧರು ಕೊರೋನಾ ಸೋಂಕಿಗೆ ಭಯ ಪಡುತ್ತಿದ್ದಾರೆ. ಆದರೆ ವೆಂಕೋಸ ಅವರು ತಮ್ಮ ಧೈರ್ಯ ಮತ್ತು ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುವ ತಮ್ಮ ಮನೋಬಲದ ಕಾರಣದಿಂದಲೇ ಸದ್ಯ ಕೊರೋನಾ ಗೆದ್ದಿದ್ದಾರೆ. ಜೀವನದ ಅನೇಕ ಸಂದರ್ಭದಲ್ಲಿ ಹೋರಾಟ ನಡೆಸಿ ಗೆದ್ದಿರುವ ಅವರನ್ನು ಕೊರೋನಾ ಸೋಲಿಸಲು ಹೇಗೆ ಸಾಧ್ಯ. ಅವರ ಆತ್ಮವಿಶ್ವಾಸ ಅವರನ್ನು ಕೊರೋನಾ ಗೆಲ್ಲುವಂತೆ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.