ಬೆಂಗಳೂರು : ಸಾರ್ವಜನಿಕ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಹಜ. ಕೆಲವೊಮ್ಮೆ ಸರಕಾರಗಳು ಅವಶ್ಯಕತೆಗಳನ್ನು ಪೂರೈಸುವಲ್ಲಿ ಆಸಕ್ತಿ ತೋರಿದರೂ ಹಲವಾರು ಕಾರಣಗಳಿಂದಾಗಿ ಆ ಯೋಜನೆಗಳು ತಳ ಹಿಡಿಯುತ್ತವೆ. ಸಾರ್ವಜನಿಕ ಶೌಚಾಲಯಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಶೌಚಾಲಯವಿದ್ದರೂ ಅದರ ನಿರ್ವಹಣೆಯ ಕೊರತೆಯ ಕಾರಣದಿಂದಾಗಿ ಉಪಯೋಗ ಶೂನ್ಯವಾಗಿ ಬಿಡುತ್ತದೆ.
ಪುರುಷರಾದರೆ ಹೇಗೋ ನಿಭಾಯಿಸಿ ಬಿಡುತ್ತಾರೆ. ಆದರೆ ಮಹಿಳೆಯರ ಸ್ಥಿತಿ ಹಾಗಲ್ಲ. ಹೀಗೆ ಮಹಿಳೆಯರ ಸಮಸ್ಯೆಯನ್ನು ಮನವರಿಕೆ ಮಾಡಿಕೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಳೆಯ ಸರ್ಕಾರಿ ಬಸ್ಸುಗಳನ್ನು ಮಹಿಳಾ ಶೌಚಾಲಯಗಳನ್ನಾಗಿ ಮಾರ್ಪಾಡು ಮಾಡುವ ಗಮನಾರ್ಹ ಮಾದರಿ ಕೆಲಸಕ್ಕೆ ಮುಂದಾಗಿದೆ.
ಬೆಂಗಳೂರು ನಗರದ ಸರ್ಕಾರಿ ಬಸ್ಸು ತಂಗುದಾಣಗಳಲ್ಲಿ ಮಹಿಳೆಯರಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡ ಅಧಿಕಾರಿಗಳು ಹಳೆಯ ನಿರುಪಯುಕ್ತವೆನಿಸಿದ ಬಸ್ಸುಗಳನ್ನು ಸ್ತ್ರೀ ಶೌಚಾಲಯಗಳಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆಗೆ ಇದೇ ಮಹಿಳಾ ದಿನಾಚರಣೆಯಂದು ಚಾಲನೆಯನ್ನು ನೀಡಿದೆ. ಅಲ್ಲದೇ ಇದರ ಲಾಂಛನವನ್ನೂ ಈಗಾಗಲೇ ಬಿಡುಗಡೆ ಮಾಡಿದ್ದಾರೆ.
ಇಂತಹ ವ್ಯವಸ್ಥೆಯನ್ನು ಮೊದಲಿಗೆ ಬಳಕೆಗೆ ತಂದ ಕೀರ್ತಿ ಮಹಾರಾಷ್ಟ್ರದ ಪುಣೆಗೆ ಸಲ್ಲುತ್ತದೆ. ಪುಣೆಯಲ್ಲಿ ಹಳೆಯ ನಿರುಪಯುಕ್ತವೆನಿಸಿದ ಬಸ್ಸುಗಳನ್ನು ಶೌಚಾಲಯಗಳಾಗಿ ಮರುಬಳಕೆಗೆ ತಂದರು. ಈ ತಿಂಗಳ ಮುಕ್ತಾಯದಲ್ಲಿ ಕರ್ನಾಟಕದಲ್ಲಿಯೂ ಇಂತಹ ಶೌಚಾಲಯಗಳನ್ನು ಬಳಕೆಗೆ ತರುವ ಭರವಸೆಯನ್ನು ಕೆಎಸ್ಆರ್ಟಿಸಿ ಈಗಾಗಲೇ ನೀಡಿದೆ. ಇವುಗಳ ಬಳಕೆಯಿಂದಾಗಿ ಮುಂಬರುವ ದಿನಗಳಲ್ಲಿ ಕೆಎಸ್ಆರ್ಟಿಸಿಯ ಮಹಿಳಾ ಸಿಬ್ಬಂದಿಗಳಿಗೂ ಹೆಚ್ಚಿನ ಅನುಕೂಲವಾಗುವುದಾಗಿಯೂ ಸಂಸ್ಥೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಅತ್ಯಾಧುನಿಕ ವ್ಯವಸ್ಥೆಗಳನ್ನೂ ಈ ಮೊಬೈಲ್ ಶೌಚಾಲಯಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಈ ಯೋಜನೆ ಸಫಲವಾದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್ಸುಗಳನ್ನು ಈ ರೀತಿ ಮಾರ್ಪಾಡು ಮಾಡಲಾಗುವ ಬಗ್ಗೆಯೂ ಸಂಸ್ಥೆ ಚಿಂತನೆಯನ್ನು ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.