ನವದೆಹಲಿ : ಆರನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮುಖ್ಯ ಕಾರ್ಯಕ್ರಮ ಜೂನ್ 21 ರಂದು ಲಡಾಖ್ನ ಲೇಹ್ನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ ಎಂದು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಹೇಳಿದ್ದಾರೆ.
“2020ರ 6ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮುಖ್ಯ ರಾಷ್ಟ್ರೀಯ ಕಾರ್ಯಕ್ರಮ ಜೂನ್ 21 ರಂದು ಲಡಾಖ್ ರಾಜಧಾನಿ ಲೇಹ್ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ” ಎಂದು ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
2020 ರ ಯೋಗ ಕಾರ್ಯಕ್ರಮ ಅತ್ಯಂತ ಅನನ್ಯ ಮತ್ತು ವಿಭಿನ್ನವಾಗಿರಲಿದೆ ಎಂಬ ಭರವಸೆಯನ್ನು ಅವರು ನೀಡಿದ್ದು, ಇದೇ ಮೊದಲ ಬಾರಿಗೆ ಲೇಹ್ನಂತಹ ಎತ್ತರದ ಸ್ಥಳದಲ್ಲಿ ಯೋಗ ಕಾರ್ಯಕ್ರಮದಂತಹ ದೊಡ್ಡ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ ಎಂದಿದ್ದಾರೆ.
ಕಾಮನ್ ಯೋಗ ಪ್ರೊಟೊಕಾಲ್ (ಸಿವೈಪಿ) ಆಧಾರಿತ 45 ನಿಮಿಷಗಳ ಯೋಗ ಡ್ರಿಲ್ ಯೋಗ ಕಾರ್ಯಕ್ರಮದ ವೀಕ್ಷಣೆಯ ಪ್ರಮುಖ ಅಂಶವಾಗಿದೆ. ಲೇಹ್ನಲ್ಲಿ ನಡೆಯಲಿರುವ ಯೋಗ ದಿನದಂದು ಪ್ರಧಾನ ಮಂತ್ರಿ ಸಿವೈಪಿ ಆಧಾರಿತ ‘ಯೋಗಾಸನ’ಗಳನ್ನು ನಡೆಸುವ ನಿರೀಕ್ಷೆಯಿದೆ.
“ಸಿಐಐ ಮತ್ತು ಎಫ್ಐಸಿಸಿಐನಂತಹ ಕೈಗಾರಿಕಾ ಸಂಸ್ಥೆಗಳು, ಸಿಬಿಎಸ್ಇ, ಯುಜಿಸಿ ಮತ್ತು ಎನ್ಸಿಇಆರ್ಟಿಯಂತಹ ಶಿಕ್ಷಣ ಸಂಸ್ಥೆಗಳು ಮತ್ತು ಇತರ ಹಲವಾರು ಪಾಲುದಾರರು ಈಗಾಗಲೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ -2020 ಗಾಗಿ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಸಿದ್ಧಪಡಿಸಿವೆ. ಪೂರ್ವಸಿದ್ಧತಾ ಚಟುವಟಿಕೆಗಳು ಸಾಮಾನ್ಯವಾಗಿ ಕಾರ್ಯಕ್ರಮ ನಡೆಯುವ ಮೂರರಿಂದ ನಾಲ್ಕು ತಿಂಗಳ ಮೊದಲೇ ಆರಂಭವಾಗುತ್ತವೆ ಎಂದು ನಾಯಕ್ ಹೇಳಿದ್ದಾರೆ.
ಕಳೆದ ವರ್ಷ ರಾಂಚಿಯಲ್ಲಿ ಯೋಗ ದಿನಾಚರಣೆ ನಡೆದಿದ್ದು, ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನವದೆಹಲಿಯ ರಾಜ್ಪಥ್ನಲ್ಲಿ ಮೋದಿ ಸೇರಿದಂತೆ 30,000 ಕ್ಕೂ ಹೆಚ್ಚು ಜನರು ಯೋಗ ಪ್ರದರ್ಶನ ನೀಡುವ ಮೂಲಕ ಜೂನ್ 21, 2015 ರಂದು ವಿಶ್ವದಾದ್ಯಂತ ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಸೆಪ್ಟೆಂಬರ್ 27, 2014 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ಜಿಎ) ಭಾಷಣ ಮಾಡಿದ ಪ್ರಧಾನಮಂತ್ರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಲ್ಪನೆಯನ್ನು ಮೊದಲು ಪ್ರಸ್ತಾಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.