ಬೆಂಗಳೂರು: ಕರ್ನಾಟಕದ ಇಬ್ಬರು ಮಕ್ಕಳು ಈ ಬಾರಿಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ 9 ವರ್ಷದ ಆರತಿ ಕಿರಣ್ ಶೇಟ್ ಮತ್ತು ರಾಯಚೂರು ಜಿಲ್ಲೆಯ 11 ವರ್ಷದ ವೆಂಕಟೇಶ್ ಪಾತ್ರರಾಗಿದ್ದಾರೆ.
ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ರಾಜ್ಯದಲ್ಲಿ ತಲೆದೋರಿದ್ದ ಪ್ರವಾಹ ಪರಿಸ್ಥಿತಿಯಲ್ಲಿ ಬಾಲಕ ವೆಂಕಟೇಶ್ ಜಲಾವೃತ ರಸ್ತೆಯ ಮಧ್ಯೆ ನಿಂತು ಆಂಬುಲೆನ್ಸ್ಗೆ ದಾರಿ ತೋರಿಸಿದ್ದ, ಈ ಮೂಲಕ ಅಂಬ್ಯುಲೆನ್ಸ್ನಲ್ಲಿದ್ದ ಐವರನ್ನು ರಕ್ಷಿಸಿದ್ದ. ಆತನ ಈ ಸಾಹಸ ಕ್ಯಾಮೆರಾದಲ್ಲಿ ಸೆರೆ ಆಗಿತ್ತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಯನ್ನು ಗಳಿಸಿತ್ತು.
ಬಾಲಕಿ ಆರತಿ ಹಸುವೊಂದು ದಾಳಿ ಮಾಡಿದ ಸಂದರ್ಭದಲ್ಲಿ ತನ್ನ ಎರಡು ವರ್ಷದ ತಮ್ಮನನ್ನು ಕೆಚ್ಚೆದೆಯಿಂದ ಪಾರು ಮಾಡಿದ ಕಾರಣಕ್ಕೆ ಶೌರ್ಯ ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ.
ದೇಶದ ಒಟ್ಟು 22 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಘೋಷಣೆಯಾಗಿದ್ದು, ಜನವರಿ 26ರಂದು ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗಿ ಇವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಪ್ರತಿ ಪ್ರಶಸ್ತಿಯು ಪ್ರಶಸ್ತಿ ಪದಕ, 1,00,000 ರೂ. ನಗದು, 10,000 ರೂ. ಮೌಲ್ಯದ ಬುಕ್ ವೋಚರ್, ಪ್ರಮಾಣ ಪತ್ರ ಹೊಂದಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.