ನವದೆಹಲಿ: ಕಳೆದ ವರ್ಷದ ಆಗಸ್ಟ್ 5 ರಂದು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ಸಕಾರಾತ್ಮಕ ಪರಿಣಾಮದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ 36 ಕೇಂದ್ರ ಸಚಿವರುಗಳು ತಂಡ ಈ ವಾರದ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದೆ.
370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಆ ಪ್ರದೇಶದ ಜನರ ಕಲ್ಯಾಣಕ್ಕಾಗಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆಯೂ ಕೇಂದ್ರ ಸಚಿವರುಗಳು ಜನರಿಗೆ ಮಾಹಿತಿಗಳನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಮತ್ತು ಅದನ್ನು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಈ ಪ್ರದೇಶಕ್ಕೆ ಕೇಂದ್ರ ಸಚಿವರುಗಳು ನೀಡುತ್ತಿರುವ ಮೊದಲ ಭೇಟಿ ಇದಾಗಿದೆ ಎಂಬುದು ಗಮನಾರ್ಹ.
ಜನವರಿ 17 ರಂದು ನಡೆಯಲಿರುವ ಕೇಂದ್ರ ಸಚಿವರ ಸಭೆಯಲ್ಲಿ ಕೇಂದ್ರ ಸಚಿವರ ಭೇಟಿಯ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ರೈಲ್ವೆ ಸಚಿವ ಪಿಯೂಷ್ ಗೋಯಲ್ ಜನವರಿ 19 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬಹುದು ಎಂದು ತಿಳಿದುಬಂದಿದೆ.
ಅನುರಾಗ್ ಠಾಕೂರ್, ಗಿರಿರಾಜ್ ಸಿಂಗ್, ಪ್ರಹ್ಲಾದ್ ಜೋಶಿ, ರಮೇಶ್ ಪೋಖ್ರಿಯಾಲ್ ನಿಶಾಂಕ್, ರೇಣುಕಾ ಸಿಂಗ್, ಜಿತೇಂದ್ರ ಸಿಂಗ್ ಮತ್ತು ಕಿರಣ್ ರಿಜ್ಜು ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿರುವ ಕೇಂದ್ರ ಸಚಿವರುಗಳ ತಂಡದಲ್ಲಿ ಇರಲಿದ್ದಾರೆ, ಭೇಟಿಯ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಗೆ ಅವರು ಭೇಟಿಯನ್ನು ನೀಡಲಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.