ಹೈದರಾಬಾದ್: ವಿಜಯವಾಡ ಮತ್ತು ಗುಂಟೂರು ಪ್ರದೇಶದಲ್ಲಿ ಬರುವ ತನ್ನ ನೂತನ ರಾಜಧಾನಿಗೆ ಅಮರಾವತಿ ಎಂದು ಹೆಸರಿಡಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಗೆಗಿನ ನಿರ್ಣಯವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ರಾಜ್ಯ ಸಂಪುಟ ಬುಧವಾರ ಅಂಗೀಕಾರಗೊಳಿಸಿತು.
ಅಮರಾವತಿ ಪ್ರದೇಶ ಗುಂಟೂರು ಜಿಲ್ಲೆಯಲ್ಲಿದೆ. ಇದರ ಇತಿಹಾಸ, ಆಧ್ಯಾತ್ಮಿಕ ಮತ್ತು ಪೌರಾಣಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ತಮ್ಮ ರಾಜ್ಯದ ನೂತನ ರಾಜಧಾನಿಗೆ ಅಮರಾವತಿ ಎಂದು ಹೆಸರಿಡಲು ನಿರ್ಧರಿಸಲಾಗಿದೆ ಎಂದು ನಾಯ್ಡು ತಿಳಿಸಿದ್ದಾರೆ.
ದೇವತೆಗಳ ರಾಜನಾದ ಇಂದ್ರನ ನಗರ ಅಮರಾವತಿ ಎಂದು ಅವರು ಪೌರಾಣಿಕ ಕಥೆಯನ್ನು ಉಲ್ಲೇಖಿಸುತ್ತಾ ಹೇಳಿದ್ದಾರೆ.
ಅಮರಾವತಿ ಕೃಷ್ಣಾನದಿ ತಟದಲ್ಲಿದ್ದು, ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಅಮರೇಶ್ವರ ದೇಗುಲದಿಂದಾಗಿ ಇದಕ್ಕೆ ಅಮರಾವತಿ ಎಂಬ ಹೆಸರು ಬಂದಿದೆ. ಇದು 400 ವರ್ಷಗಳ ಕಾಲ ಶಾತವಾಹನರ ರಾಜಧಾನಿಯಾಗಿತ್ತು. ಇಲ್ಲಿಗೆ ಗೌತಮ ಬುದ್ಧ, ಚಕ್ರವರ್ತಿ ಅಶೋಕ, ಚೀನಾ ಯಾತ್ರಿಕ ಹೂಯನ್ ಸಾಂಗ್ ಕೂಡ ಭೇಟಿ ನೀಡಿದ್ದರು ಎಂಬ ಪ್ರತೀತಿ ಇದೆ.
ಇದೀಗ ಈ ನಗರವನ್ನು ಆಧುನೀಕರಣಗೊಳಿಸಿ ಬಡವರು ಸೇರಿದಂತೆ ಎಲ್ಲಾ ವರ್ಗದ ಜನರ ವಾಸಕ್ಕೆ ಯೋಗ್ಯ ಸ್ಥಳವನ್ನಾಗಿ ಮಾಡುವ ಇರಾದೆ ಆಂಧ್ರ ಪ್ರದೇಶ ಸರ್ಕಾರಕ್ಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.