ಲಕ್ನೋ: ಇತ್ತೀಚಿನ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪವನ್ನು ಹೊತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ವನ್ನು ನಿಷೇಧಿಸುವಂತೆ ಉತ್ತರ ಪ್ರದೇಶ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿಯನ್ನು ಮಾಡಿಕೊಂಡಿದೆ.
ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಒ.ಪಿ ಸಿಂಗ್ ಅವರು ಪಿಎಫ್ಐ ನಿಷೇಧವನ್ನು ಕೋರಿ ರಾಜ್ಯ ಗೃಹ ಇಲಾಖೆಗೆ ಪತ್ರ ಕಳುಹಿಸಿದ ಒಂದು ದಿನದ ನಂತರ ಗೃಹ ಸಚಿವಾಲಯಕ್ಕೆ ಈ ಮನವಿಯನ್ನು ಮಾಡಿಕೊಳ್ಳಲಾಗಿದೆ.
ಗೃಹ ಸಚಿವಾಲಯವು ಉತ್ತರ ಪ್ರದೇಶ ಸರ್ಕಾರದ ಮನವಿ ಪತ್ರವನ್ನು ಸ್ವೀಕರಿಸಿದೆ, ಸಂಘಟನೆಯ ಮೇಲೆ ನಿಷೇಧ ಹೇರುವುದಕ್ಕೂ ಮೊದಲು ಕಾನೂನು ಮತ್ತು ಇತರ ಸಂಬಂಧಿತ ಇಲಾಖೆಗಳನ್ನು ಗೃಹಸಚಿವಾಲಯ ಸಂಪರ್ಕಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಗುಪ್ತಚರ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೇರಿದಂತೆ ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳಿಂದ ಸಚಿವಾಲಯವು ಈ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆಯಿದೆ.
ಹಿಂಸಾಚಾರ ಪೀಡಿತ ಪ್ರದೇಶಗಳಿಂದ 23 ಪಿಎಫ್ಐ ಕಾರ್ಯಕರ್ತರನ್ನು ರಾಜ್ಯ ಪೊಲೀಸ್ ಪಡೆ ಬಂಧಿಸಿದೆ ಮತ್ತು ಗಲಭೆಗೆ ಪ್ರಾಥಮಿಕವಾಗಿ ಪ್ರಚೋದಿಸಿದವರು ಯಾರೆಂಬುದನ್ನು ಈಗಾಗಲೇ ಸ್ಪಷ್ಟಪಡಿಸಿಕೊಂಡಿದೆ ಎಂದು ಉತ್ತರ ಪ್ರದೇಶದ ಡಿಜಿಪಿ ತಿಳಿಸಿದ್ದಾರೆ.
“ಬಂಧಿತ ಪಿಎಫ್ಐ ಸದಸ್ಯರಿಂದ ನಮಗೆ ಮಹತ್ವದ ಮಾಹಿತಿ ಸಿಕ್ಕಿದೆ, ಆದರೆ ಈ ಸಮಯದಲ್ಲಿ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ.” ಎಂದಿದ್ದಾರೆ. ಅವರ ಈ ಹೇಳಿಕೆ ವಿವಾದಾತ್ಮಕ ಸಂಘಟನೆಯ ನಿಷೇಧದ ಪ್ರಕ್ರಿಯೆಯ ಆರಂಭವನ್ನು ಸೂಚಿಸುತ್ತದೆ.
ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಿಎಫ್ಐ ಅನ್ನು ನಿಷೇಧಿಸಲು ರಾಜ್ಯ ಸರ್ಕಾರ ಬಲವಾಗಿ ಒಲವು ತೋರಿದೆ ಎಂದಿದ್ದರು.
ಪಿಎಫ್ಐ ಸಂಘಟನೆಯು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ)ದಿಂದ ರೂಪುಗೊಂಡ ಸಂಘಟನೆ ಎಂದು ಹೇಳಲಾಗುತ್ತದೆ, ಸಿಮಿಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ, 2001 ರಲ್ಲಿ ಅದನ್ನು ನಿಷೇಧಿಸಲಾಯಿತು.
“ಹಲವಾರು ಸಿಮಿ ಕಾರ್ಯಕರ್ತರು ಈಗ ಪಿಎಫ್ಐನಲ್ಲಿದ್ದಾರೆ ಮತ್ತು ರಾಜ್ಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ. ಇತ್ತೀಚಿನ ಪ್ರತಿಭಟನೆ ವೇಳೆ ಅವರಲ್ಲಿ ಸುಮಾರು 22 ಸದಸ್ಯರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ಸೇರಿದಂತೆ ಏಳು ರಾಜ್ಯಗಳಲ್ಲಿ ಪಿಎಫ್ಐ ಸಕ್ರಿಯವಾಗಿದೆ ಎಂದು ಮೌರ್ಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.