ಜಮ್ಮು: ಜಮ್ಮುವಿನ ರೇಸಿ ಜಿಲ್ಲೆಯ ಕಾತ್ರ ಪಟ್ಟಣದ ತ್ರಿಕುಟಾ ಬೆಟ್ಟದಲ್ಲಿರುವ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ನವರಾತ್ರಿಯ ಸಂದರ್ಭದಲ್ಲಿ 3.64 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿಯನ್ನು ನೀಡಿದ್ದಾರೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 7 ರವರೆಗೆ ಅತಿ ಹೆಚ್ಚು ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸಿ ಶ್ರೀ ದೇವಿಯ ದರ್ಶನವನ್ನು ಪಡೆದುಕೊಂಡಿದ್ದಾರೆ. ಇದು ಇದುವರೆಗಿನ ದಾಖಲೆ ಎನ್ನಲಾಗಿದೆ.
ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಸಿಇಒ ಸಿಮ್ರನ್ದೀಪ್ ಸಿಂಗ್ ಅವರ ಪ್ರಕಾರ, “ಒಂಬತ್ತು ದಿನಗಳ ಉತ್ಸವದಲ್ಲಿ ದಾಖಲೆಯ 3,64,643 ಸಂಖ್ಯೆಯ ಯಾತ್ರಾರ್ಥಿಗಳು ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹೊಸದಾಗಿ ನಿರ್ಮಿಸಲಾದ ಚಿನ್ನದ ಗುಹೆ ಪ್ರವೇಶದ್ವಾರ, ಲಂಗರ್ ಮತ್ತು ಆರತಿ ಸಮಯದಲ್ಲಿ ಭಜನೆಗಳನ್ನು ಪಠಿಸಲು ಹೆಸರಾಂತ ಗಾಯಕರ ಉಪಸ್ಥಿತಿಯಿಂದಾಗಿ ಭೇಟಿ ನೀಡಿದ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ” ಎಂದಿದ್ದಾರೆ.
ಈ ಹಿಂದೆ ಈ ದೇವಾಲಯಕ್ಕೆ ನವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಿದ ಭಕ್ತರ ಅಂಕಿ ಅಂಶಗಳು- 2018 ರಲ್ಲಿ 3.18 ಲಕ್ಷ, 2017 ರಲ್ಲಿ 3.03 ಲಕ್ಷ, 2016 ರಲ್ಲಿ 3.50 ಲಕ್ಷ, 2015 ರಲ್ಲಿ 2.76 ಲಕ್ಷ ಮತ್ತು 2014 ರಲ್ಲಿ 2 ಲಕ್ಷ. ನವರಾತ್ರಿಯ ಸಮಯದಲ್ಲಿ 51,225 ಯಾತ್ರಾರ್ಥಿಗಳು ಮಂಡಳಿಯು ನಡೆಸುತ್ತಿರುವ ಲಂಗರ್ ಸೇವೆ(ಅನ್ನ ಸಂತರ್ಪಣೆ) ಯನ್ನು ಪಡೆದುಕೊಂಡಿದ್ದಾರೆ. ಸುಮಾರು 55,477 ಮಂದಿ ಪೋನಿ, ಪಿಥು ಮತ್ತು ಪಾಲ್ಕಿ ಸೇವೆಗಳನ್ನು ಗುಹೆಯನ್ನು ತಲುಪಲು ಬಳಸಿಕೊಂಡಿದ್ದಾರೆ. 71,000 ಯಾತ್ರಾರ್ಥಿಗಳು ಭವನದಿಂದ ಭೈರೋನ್ಗೆ ತಲುಪಲು ಕೇಬಲ್ ಕಾರ್ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. 16,000 ಯಾತ್ರಾರ್ಥಿಗಳು ಅರ್ಧಕುಮಾರಿ ಮತ್ತು ಪವಿತ್ರ ಗುಹೆಯ ನಡುವೆ ಸಂಚರಿಸಲು ಬ್ಯಾಟರಿ ಕಾರು ಸೇವೆಯನ್ನು ಬಳಸಿದ್ದಾರೆ.
ದೇವಾಲಯವನ್ನು ತಲುಪಲು 5,260 ಯಾತ್ರಿಕರು ಹೆಲಿಕಾಪ್ಟರ್ ಸೇವೆಯನ್ನು ಪಡೆದುಕೊಂಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಖ್ಯಾತ ಗಾಯಕ ಸೋನು ನಿಗಮ್, ಸೂಫಿ ಗಾಯಕ-ಬಿಜೆಪಿ ಸಂಸದ ಹಂಸ್ ರಾಜ್ ಹನ್ಸ್, ಗುರುದಾಸ್ ಮನ್, ಕವಿತಾ ಪೌಡ್ವಾಲ್, ಜಸ್ಪಿಂದರ್ ನರುಲಾ ಮತ್ತು ಲಖ್ವಿಂದರ್ ವಡಾಲಿ ಈ ದೇವಾಲಯದಲ್ಲಿ ಸಂಗೀತ ಕಾರ್ಯಕ್ರಮವನ್ನು ನವರಾತ್ರಿ ವೇಳೆಯಲ್ಲಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.