ಕೋಲ್ಕತ್ತಾ: ಇಡೀ ದೇಶದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಮಾಡಲಾಗುವುದು, ತೃಣಮೂಲ ಕಾಂಗ್ರೆಸ್ ಎಷ್ಟೇ ವಿರೋಧಿಸಿದರೂ ನಾವದನ್ನು ಮಾಡಿಯೇ ತೀರುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಪಶ್ಚಿಮಬಂಗಾಳದಲ್ಲಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದ ಅವರು, “ತಮ್ಮ ಮತದಾರರ ನೆಲೆಯನ್ನು ವಿಸ್ತರಿಸುವ ಸಲುವಾಗಿ ಬ್ಯಾನರ್ಜಿಯವರು ಅಕ್ರಮ ಒಳನುಸುಳುಕೋರರನ್ನು ತಮ್ಮ ರಾಜ್ಯದಲ್ಲಿ ಉಳಿಸಿಕೊಳ್ಳಲು ನೋಡುತ್ತಿದ್ದಾರೆ. ಹಿಂದೆ ಎಡಪಕ್ಷಗಳು ಆಡಳಿತದಲ್ಲಿ ಇರುವಾಗ ಅವರು ಅಕ್ರಮ ವಲಸಿಗರನ್ನು ವಿರೋಧಿಸಿದ್ದರು, ಆದರೀಗ ಮತ ಪಡೆಯಲು ಅವರೇ ಅವರನ್ನು ಬೆಂಬಲಿಸುತ್ತಿದ್ದಾರೆ. ತನ್ನ ರಾಜ್ಯದ ಹಿತಾಸಕ್ತಿಗಿಂತ ರಾಜಕೀಯದ ಹಿತಾಸಕ್ತಿಯನ್ನು ಅವರು ಮುಂದಿಟ್ಟಿದ್ದಾರೆ” ಎಂದಿದ್ದಾರೆ.
370ನೇ ವಿಧಿಯನ್ನು ರದ್ದುಪಡಿಸಿದ ತಮ್ಮ ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, “370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಪಡಿಸಿದೆ ಮತ್ತು ಅದನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿಸಿದೆ. ಇದು ಪಶ್ಚಿಮಬಂಗಾಳದ ಮಣ್ಣಿನ ಮಗ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ನೀಡಿದ ಅತ್ಯುನ್ನತ ಗೌರವವಾಗಿದೆ” ಎಂದಿದ್ದಾರೆ.
ನಾವು ಕೂಡ ರಾಜಕೀಯದಲ್ಲಿದ್ದೇವೆ, ಆದರೆ ಭಾರತ ಮಾತೆಯ ವಿಷಯ ಬಂದಾಗ ನಾವು ಪಕ್ಷಕ್ಕಿಂತ ಮೊದಲು ರಾಷ್ಟ್ರದ ಬಗ್ಗೆ ಯೋಚನೆ ಮಾಡುತ್ತೇವೆ.
ಪಶ್ಚಿಮಬಂಗಾಳವು ದೇಶಕ್ಕೆ ಸ್ವಾತಂತ್ರ್ಯ ಹೋರಾಟಗಾರರನ್ನು, ಸಂಗೀತಗಾರರನ್ನು, ಕವಿಗಳನ್ನು, ವಿಜ್ಞಾನಿಗಳನ್ನು, ಆಧ್ಯಾತ್ಮಿಕ ಚಿಂತಕರನ್ನು ನೀಡಿದೆ. ಚಳುವಳಿಗಳನ್ನು ನೀಡಿದೆ. ಆದರೆ ಆ ಗತ ವೈಭವಕ್ಕೆ ಇಂದು ಏನಾಗಿದೆ? ಇದನ್ನು ನೋಡಲು ನಾವು ಎಡಪಂಥಿಯರನ್ನು ಓಡಿಸಿದ್ದಾ ? ಬಂಗಾಳದಲ್ಲಿ ಈಗಲೂ ಬಡತನವಿದೆ, ಆಯುಷ್ಮಾನ್ ಭಾರತವನ್ನು ಈ ರಾಜ್ಯಕ್ಕೆ ತರಲು ಮಮತಾ ಬಿಡುತ್ತಿಲ್ಲ. ಮೋದಿ ಜನಪ್ರಿಯರಾಗುತ್ತಾರೆ ಎಂಬ ಭಯ ಅವರದ್ದು ಎಂದಿದ್ದಾರೆ.
ನೀವು ಎಷ್ಟೇ ಪ್ರಯತ್ನಿಸಿದರೂ ಮೋದಿ ಜನಪ್ರಿಯತೆಯನ್ನು ತಡೆಯಲು ಸಾಧ್ಯವಿಲ್ಲ. ಮೋದಿಯನ್ನು ವಿಶ್ವ ಒಪ್ಪಿಕೊಂಡಿದೆ, ಪಶ್ಚಿಮಬಂಗಾಳವೂ ಒಪ್ಪಿಕೊಳ್ಳುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.