ಮೈಸೂರು : ನಾಡಹಬ್ಬ ಮೈಸೂರು ದಸರಾ 2019ಗೆ ಖ್ಯಾತ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಸ್. ಎಲ್ ಭೈರಪ್ಪ ಅವರು ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ ನೀಡಿದರು.
ದೀಪ ಬೆಳಗಿಸುವ ಮೂಲಕ ಸಾಹಿತಿ ಎಸ್. ಎಲ್. ಭೈರಪ್ಪ ದಸರಾ ಸಂಭ್ರಮವನ್ನು ಉದ್ಘಾಟನೆಗೊಳಿಸಿದರು. ಅ. 8 ರವರೆಗೆ ಸಂಭ್ರಮ ಮುಂದುವರೆಯಲಿದೆ.
ನಾಡಹಬ್ಬ ದಸರಾದ ಉದ್ಘಾಟನೆ ವೇಳೆ ಉಪಸ್ಥಿತರಿದ್ದ ಗಣ್ಯರು ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಚಾಮುಂಡೇಶ್ವರಿ ದೇವಸ್ಥಾನ ಪಕ್ಕದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಹಾಗೂ ಹೊರಭಾಗದಲ್ಲಿ ಸೇರಿದ್ದ ಸಾವಿರಾರು ಮಂದಿಯ ಜಯಘೋಷ ಹಾಕಿದರು.
ಕರುನಾಡಿನ ಜಾನಪದ ಕಲಾ ತಂಡಗಳು ಅತಿಥಿಗಳಿಗೆ ಸಾಂಪ್ರದಾಯಿಕ ಸ್ವಾಗತವನ್ನು ಕೋರಿದವು. ವೇದಿಕೆಗೆ ಆಗಮಿಸುವುದಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರು ಹಾಗೂ ಇತರ ಗಣ್ಯರೊಂದಿಗೆ ಚಾಮುಂಡಿ ದೇವಿಯ ದರ್ಶನ ಪಡೆದರು.
ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಚಿವ ಸಿ.ಟಿ.ರವಿ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿ.ಪಂ. ಅಧ್ಯಕ್ಷೆ ಪರಿಮಳಾ ಶ್ಯಾಮ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇಂದು ಪೊಲೀಸ್ ಸಹಾಯ ಕೇಂದ್ರ ಉದ್ಘಾಟನೆ, ದಸರಾ ಕ್ರೀಡಾ ಜ್ಯೋತಿ ಸಂಚಾರಕ್ಕೆ ಚಾಲನೆ, ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ, ಸಾಹಸೋತ್ಸವಕ್ಕೆ ಚಾಲನೆ, ಆಹಾರ ಮೇಳ ಉದ್ಘಾಟನೆ, ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ, ದಸರಾ ವಸ್ತು ಪ್ರದರ್ಶನ ಉದ್ಘಾಟನೆ, ಪುಸ್ತಕ ಮೇಳಕ್ಕೆ ಚಾಲನೆ ಕಾರ್ಯಕ್ರಮಗಳಿಗೆ ಗಣ್ಯರು ಚಾಲನೆ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.