ಚೆನ್ನೈ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಫೆಬ್ರವರಿಯಲ್ಲಿ ಭಾರತೀಯ ವಾಯುಸೇನೆಯು ದಾಳಿ ನಡೆಸಿದ ಪಾಕಿಸ್ಥಾನದ ಬಾಲಕೋಟ್ನಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಪುನಃ ಸಕ್ರಿಯಗೊಳಿಸಲಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೋಮವಾರ ಮಾಹಿತಿ ನೀಡಿದ್ದಾರೆ. ಜನರಲ್ ರಾವತ್ ಅವರ ಪ್ರಕಾರ, ಈ ಹಿಂದೆ ವಾಯುಸೇನೆ ನಾಶ ಮಾಡಿದ್ದ ಬಾಲಕೋಟ್ನಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಎಂ) ಶಿಬಿರವನ್ನು ಪುನಃ ಸಕ್ರಿಯಗೊಳಿಸಲಾಗಿದೆ.
ಚೆನ್ನೈನಲ್ಲಿ ನಡೆದ ಯಂಗ್ ಲೀಡರ್ಸ್ ಟ್ರೈನಿಂಗ್ ವಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥರು, ಈ ಹಿಂದೆ ಕೈಗೊಂಡ ಕ್ರಮಗಳನ್ನೇ ಭಾರತ ಪುನರಾವರ್ತಿಸುವುದಿಲ್ಲ ಎಂದು ಹೇಳಿದರು. “ನಾವು ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಗಳನ್ನು ಈಗಾಗಲೇ ನಾವು ಮಾಡಿದ್ದೇವೆ, ಮುಂದೇನು ಮಾಡುತ್ತೇವೆ ಎಂಬುದನ್ನು ಶತ್ರುಗಳೇ ಊಹಿಸಿಕೊಳ್ಳಲಿ” ಎಂದಿದ್ದಾರೆ.
ಭಾರತದ ಭೂಪ್ರದೇಶಕ್ಕೆ ನುಸುಳಲು 500 ಕ್ಕೂ ಹೆಚ್ಚು ಭಯೋತ್ಪಾದಕರು ಗಡಿಯುದ್ದಕ್ಕೂ ಕಾಯುತ್ತಿದ್ದಾರೆ ಎಂದು ಜನರಲ್ ರಾವತ್ ಹೇಳಿದ್ದಾರೆ. ತಾಪಮಾನ ಕುಸಿಯಲು ಪ್ರಾರಂಭಿಸಿದ ಕೂಡಲೇ ಭಯೋತ್ಪಾದಕರನ್ನು ಕಡಿಮೆ ಹಿಮ ಇರುವ ಪ್ರದೇಶಗಳ ಮೂಲಕ ಭಾರತೀಯ ಭೂಪ್ರದೇಶಕ್ಕೆ ತಳ್ಳಲಾಗುತ್ತಿದೆ ಎಂದಿದ್ದಾರೆ.
ಸಿಆರ್ಪಿಎಫ್ ಬೆಂಗಾವಲು ವಾಹನಗಳ ಮೇಲೆ ದಾಳಿಯನ್ನು ನಡೆಸಿ 40 ಸಿಬ್ಬಂದಿಗಳನ್ನು ಉಗ್ರರು ಹತ್ಯೆ ಮಾಡಿದ ಬಳಿಕ ಫೆಬ್ರವರಿ ತಿಂಗಳಲ್ಲಿ ಬಾಲಕೋಟ್ ವೈಮಾನಿಕ ದಾಳಿಯನ್ನು ಭಾರತೀಯ ವಾಯುಸೇನೆ ನಡೆಸಿತ್ತು. ವೈಮಾನಿಕ ದಾಳಿಯ ನಂತರ, ಐಎಎಫ್ ಮುಖ್ಯಸ್ಥ ಏರ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ ಅವರು ಮಿಲಿಟರಿ ಉದ್ದೇಶವನ್ನು ಸಾಧಿಸಲಾಗಿದೆ ಎಂದು ಘೋಷಣೆ ಮಾಡಿದ್ದರು.
ಜನರಲ್ ಬಿಪಿನ್ ರಾವತ್ ಕೂಡ ವಾಯುಸೇನಾ ಯೋಧರ ಶೌರ್ಯವನ್ನು ಶ್ಲಾಘಿಸಿದ್ದರು, ಗಡಿಯುದ್ದಕ್ಕೂ ತರಬೇತಿ ಪಡೆಯುತ್ತಿರುವ ಭಯೋತ್ಪಾದಕರು ಭಾರತದ ವಿರುದ್ಧ ದಾಳಿ ನಡೆಸಲು ಬಂದರೆ ಬದುಕುಳಿಯಲಾರರು ಎಂಬುದನ್ನು ಈ ವಾಯುದಾಳಿ ಖಚಿತಪಡಿಸಿದೆ ಎಂದು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.