ಬೆಂಗಳೂರು: ಬೆಂಗಳೂರಿನ ಜನಪ್ರಿಯ ವಿ.ವಿ.ಪುರಂ ಫುಡ್ ಸ್ಟ್ರೀಟ್ ಅನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಪರಿವರ್ತಿಸಲಾಗುವುದು ಮತ್ತು ವಾರಾಂತ್ಯದಲ್ಲಿ ಪಾದಚಾರಿಗಳಿಗೆ ಇಲ್ಲಿ ಸ್ಲಾಟ್ಗಳನ್ನು ಮೀಸಲಿಡಲಾಗುವುದು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.
“ವಿ.ವಿ ಪುರಂ ಫುಡ್ ಸ್ಟ್ರೀಟ್ ಬೆಂಗಳೂರಿನ ಹಿರಿಮೆಯಾಗಿದೆ. ಆದರೆ ಈ ಜಾಗ ತ್ಯಾಜ್ಯ ನಿರ್ವಹಣೆಯ, ಏಕ ಬಳಕೆ ಪ್ಲಾಸ್ಟಿಕ್ನ ಬಳಕೆಯ ಮತ್ತು ನೈರ್ಮಲ್ಯದ ಬಹುದೊಡ್ಡ ಸಮಸ್ಯೆಯನ್ನು ಹೊಂದಿದೆ. ಇದನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ನಾವು ಘೋಷಣೆ ಮಾಡುತ್ತೇವೆ. ಇಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ನೋಡಿಕೊಳ್ಳುತ್ತೇವೆ” ಎಂದಿದ್ದಾರೆ.
ಪಾದಾಚಾರಿಗಳಿಗೆ ಸ್ಲಾಟ್ಗಳನ್ನು ಮೀಸಲಾಗಿಡಲಾಗುವುದು ಎಂದೂ ಅವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ.
“ವಾರಾಂತ್ಯದಲ್ಲಿ ಸಂಜೆ 7 ರಿಂದ 11 ರವರೆಗೆ ವಿ.ವಿ.ಪುರಂ ಫುಡ್ ಸ್ಟ್ರೀಟ್ ಪಾದಚಾರಿಗಳಿಗೆ ಮಾತ್ರ ಮುಕ್ತವಾಗಿ ಇರುತ್ತದೆ. ಇದು ಪಾದಚಾರಿಗಳಿಗಾಗಿ ಜಾಗವನ್ನು ಪುನಃ ಪಡೆದುಕೊಳ್ಳುವ ಪ್ರಯತ್ನ” ಎಂದು ಅವರು ಹೇಳಿದ್ದಾರೆ.
ಮಂಗಳವಾರ ಫುಡ್ ಸ್ಟ್ರೀಟ್ಗೆ ಭೇಟಿ ನೀಡಿದ ನಂತರ ಸೂರ್ಯ ಈ ಹೇಳಿಕೆ ನೀಡಿದ್ದಾರೆ ಮತ್ತು ಅಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿ ಮೂಡಿಸಿದ್ದಾರೆ. ಫುಡ್ ಸ್ಟ್ರೀಟ್ ಅನ್ನು ಪರಿಸರ ಸ್ನೇಹಿ ತಾಣವನ್ನಾಗಿ ಪರಿವರ್ತಿಸುವ ಸಲುವಾಗಿ ಸುರಕ್ಷತೆ ಮತ್ತು ನೈರ್ಮಲ್ಯದ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.