ಲೇಹ್: ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು, ಲೇಹ್ನಲ್ಲಿ ಕ್ರಿಕೆಟ್ ಮತ್ತು ಕ್ರೀಡಾ ಅಕಾಡೆಮಿಯನ್ನು ಸ್ಥಾಪನೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಹೊಸದಾಗಿ ರಚನೆಯಾಗಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಎರಡು ದಿನಗಳ ಭೇಟಿಯನ್ನು ನೀಡಿರುವ ಠಾಕೂರ್ ಅವರು, “ಅತ್ಯುತ್ತಮ ಅಥ್ಲೀಟ್ಗಳನ್ನು ತಯಾರಿಸುವ ಭೂಮಿಗೆ ನಾನು ಆಗಮಿಸಿದ್ದೇನೆ. ಇಲ್ಲಿನ ಅಥ್ಲೀಟ್ಗಳಿಗೆ ತಮ್ಮನ್ನು ತಾವು ಪ್ರತಿಬಿಂಬಿಸುವಂತಹ ವೇದಿಕೆ ಸಿಗಬೇಕು ಎಂಬ ನಿಟ್ಟಿನಲ್ಲಿ ನಾನು ಪ್ರಯತ್ನಗಳನ್ನು ವರ್ಷಗಳಿಂದ ನಡೆಸುತ್ತಿದ್ದೇನೆ. ಈ ವಿಷಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂಬುದನ್ನು ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ಕ್ರಿಕೆಟ್ ಮತ್ತು ಕ್ರೀಡಾ ಅಕಾಡೆಮಿಯನ್ನು ನಾವಿಲ್ಲಿ ನಿರ್ಮಾಣ ಮಾಡಲಿದ್ದೇವೆ” ಎಂದಿದ್ದಾರೆ.
ಕ್ರೀಡಾ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ ಎಂದು ಠಾಕೂರ್, ಲೇಹ್ ಯುವಜನರು ಸಮಾನ ಅವಕಾಶಗಳನ್ನು ಪಡೆಯಲಿ ಮತ್ತು ತಮ್ಮನ್ನು ಸಾಬೀತುಪಡಿಸಲು ವೇದಿಕೆಯನ್ನು ಹೊಂದಲಿ ಎಂಬ ಕಾರಣಕ್ಕೆ ಅಕಾಡೆಮಿಯನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ 69ನೇ ಜನ್ಮ ದಿನದ ಪ್ರಯುಕ್ತ ಭಾರತೀಯ ಸೇನೆಯೊಂದಿಗೆ ಅವರು 18,000 ಅಡಿ ಎತ್ತರದಲ್ಲಿ ಸ್ವಚ್ಛತಾ ಕಾರ್ಯವನ್ನೂ ಹಮ್ಮಿಕೊಂಡರು. “ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ಮತ್ತು ವಾತಾವರಣವನ್ನು ಪರಿಸರ ಸ್ನೇಹಿಯನ್ನಾಗಿ ಮಾಡಲು ನಾವು ಜಾಗೃತರಾಗಬೇಕು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ತೊಡೆದುಹಾಕಲು ಒಟ್ಟಾಗಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು. ಪ್ಲಾಸ್ಟಿಕ್ ಬಾಟಲ್ ಬದಲು ಗ್ಲಾಸ್ ಬಾಟಲ್ ಬಳಸುವ ಮೂಲಕ ಈ ನಿಟ್ಟಿನಲ್ಲಿ ಲೇಹ್ ಜನರು ದೃಢ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.
ಅಲ್ಲದೇ, ಖರ್ದುಂಗಾ ಲಾ ಪಾಸ್ ಬಳಿಯ ಭಾರತೀಯ ಸೇನಾ ಶಿಬಿರದಲ್ಲಿ ತಿರಂಗಾವನ್ನೂ ಹಾರಿಸಿದರು. 370ನೇ ವಿಧಿ ರದ್ಧತಿ ಬಳಿಕ ಇಲ್ಲಿ ತಿರಂಗಾ ಹಾರಿಸಿ ಮೊದಲ ಸಚಿವ ಎನಿಸಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.