ನವದೆಹಲಿ: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರನ್ನು ಸೋಮವಾರ ‘ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ) ಅಡಿಯಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಈ ಕಾಯ್ದೆಯ ಅನ್ವಯ ಎರಡು ವರ್ಷಗಳ ಕಾಲ ಸೆರೆ ವಾಸ ವಿಧಿಸುವ ಅವಕಾಶಗಳಿವೆ. ಸಂವಿಧಾನದ 370ನೇ ವಿಧಿ ರದ್ಧತೆಯ ಸಮಯದಿಂದ ಅವರನ್ನು ಗೃಹಬಂಧನದಲ್ಲಿ ಇಡಲಾಗಿತ್ತು.
ಫಾರೂಕ್ ಅಬ್ದುಲ್ಲಾ ಅವರನ್ನು ಬಂಧಿಸುವ ನಿರ್ಧಾರವನ್ನು ಭಾನುವಾರ ರಾತ್ರಿ ತೆಗೆದುಕೊಳ್ಳಲಾಗಿದೆ. ಪಿಎಸ್ಎ ಅಡಿಯಲ್ಲಿ, ವಿಚಾರಣೆಯಿಲ್ಲದೆ ವ್ಯಕ್ತಿಯನ್ನು 2 ವರ್ಷಗಳವರೆಗೆ ಬಂಧಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ. ಫಾರೂಕ್ ಅಬ್ದುಲ್ಲಾ ಅವರನ್ನು ಪಿಎಸ್ಎ ಅಡಿಯಲ್ಲಿ ಬಂಧಿಸಲಾಗಿದ್ದರೂ, ಅವರ ಶ್ರೀನಗರ ನಿವಾಸದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರನ್ನು ಭೇಟಿಯಾಗಲು ಯಾವುದೇ ನಿರ್ಬಂಧವಿರುವುದಿಲ್ಲ. ಅವರ ನಿವಾಸವನ್ನೇ ಪರ್ಯಾಯ ಜೈಲನ್ನಾಗಿ ಪರಿವರ್ತಿಸಲಾಗಿದೆ.
ಈ ನಡುವೆ, ಫಾರೂಕ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡುವಂತೆ ಕೋರಿ ಎಂಡಿಎಂಕೆ ನಾಯಕ ವೈಕೊ ಸಲ್ಲಿಸಿದ್ದ ಮನವಿಗೆ ಸ್ಪಂದಿಸುವಂತೆ ಆದೇಶಿಸಿ, ಕೇಂದ್ರ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ ಮತ್ತು ಎಸ್ ಎ ನಜೀರ್ ಅವರ ನ್ಯಾಯಪೀಠ ನೋಟಿಸ್ ನೀಡಿದ್ದು, ಮುಂದಿನ ಸೆಪ್ಟೆಂಬರ್ 30 ರಂದು ಈ ವಿಷಯವನ್ನು ವಿಚಾರಣೆಗೊಳಪಡಿಸಲಿದೆ.
ವೈಕೋ ಅವರ ಅರ್ಜಿಯನ್ನು ಕೇಂದ್ರ ಸರ್ಕಾರ ವಿರೋಧಿಸಿದ್ದು, “ವೈಕೋ ಫಾರೂಕ್ ಅಬ್ದುಲ್ಲಾ ಅವರ ಸಂಬಂಧಿಯಲ್ಲ ಮತ್ತು ಜಮ್ಮು ಮತ್ತು ಕಾಶ್ಮೀರ ನಾಯಕನನ್ನು ಬಿಡುಗಡೆ ಮಾಡುವಂತೆ ಅವರು ಮಾಡಿದ ಮನವಿ “ಕಾನೂನಿನ ಪ್ರಕ್ರಿಯೆಯ ದುರುಪಯೋಗ” ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.