ನವದೆಹಲಿ: ನೂತನ ಮೋಟಾರು ವಾಹನ ಕಾಯ್ದೆ 2019 ಅನ್ನು ಜನರ ಸುರಕ್ಷತೆಗಾಗಿ ತರಲಾಗಿದೆಯೇ ಹೊರತು ಸರ್ಕಾರದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತರಲಾಗಿಲ್ಲ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಹೇಳಿದ್ದಾರೆ.
“ಕಠಿಣ ಸಂಚಾರಿ ನಿಯಮ ಆದಾಯ ಉತ್ಪಾದನೆಯ ಯೋಜನೆ ಅಲ್ಲ. ಜನರ ಸಾವಿನ ಬಗ್ಗೆ ನಿಮಗೆ ಚಿಂತೆ ಇಲ್ಲವೇ? ರಾಜ್ಯ ಸರ್ಕಾರಗಳು ದಂಡ ಕಡಿಮೆ ಮಾಡಲು ಬಯಸುವುದು ಒಳ್ಳೆಯದಲ್ಲ, ಹೀಗೆ ಮಾಡಿದರೆ ಜನರು ಕಾನೂನನ್ನು ಎಂದಿಗೂ ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಅದರ ಬಗ್ಗೆ ಭಯಪಡುವುದಿಲ್ಲ” ಎಂದು ಗಡ್ಕರಿ ಹೇಳಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಿಂದ ಸಂಚಾರಿ ಪೊಲೀಸ್ ಅಧಿಕಾರಿಗಳು ದೇಶದಾದ್ಯಂತ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ನಾಗರಿಕರಿಂದ ಭಾರಿ ಮೊತ್ತದ ದಂಡವನ್ನು ಸ್ವೀಕರಿಸುತ್ತಿದ್ದಾರೆ. ರೂ.10,000, ರೂ.23000, ರೂ.15000 ಇತ್ಯಾದಿ ಭಾರೀ ಮೊತ್ತದ ದಂಡವನ್ನು ಒಬ್ಬೊಬ್ಬರಿಂದ ವಸೂಲಿ ಮಾಡಲಾಗುತ್ತಿದೆ.
2018 ರ ವರ್ಷಕ್ಕೆ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರವೊಂದರಲ್ಲೇ ಹೆಲ್ಮೆಟ್ ಧರಿಸದ ಕಾರಣ, ಅತಿ ವೇಗದಲ್ಲಿ ವಾಹನ ಓಡಿಸಿದ ಕಾರಣ, ರೆಡ್ ಲೈಟ್ ಹಾರಿದ ಕಾರಣ, ಕುಡಿದು ವಾಹನ ಚಲಾಯಿಸಿದ ಪರಿಣಾಮ ಮೃತಪಟ್ಟ ಜನರ ಸಂಖ್ಯೆ 13261, 31365 ಮಂದಿ ಗಾಯಗೊಂಡಿದ್ದಾರೆ. ದೇಶದಲ್ಲಿ ಈ ರೀತಿಯಾಗಿ ಮೃತಪಟ್ಟವರ ಸಂಖ್ಯೆ ಲಕ್ಷಾಂತರ ಇದೆ. ಈ ಹಿನ್ನಲೆಯಲ್ಲಿ ಕಠಿಣ ನಿಯಮವನ್ನು ತರುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು.
ಸಂಚಾರಿ ನಿಯಮಗಳೆಂದರೆ ಭಾರತೀಯರಿಗೆ ಅಸಡ್ಡೆ, ಸಿಕ್ಕಿ ಬಿದ್ದರೆ ನೂರು, ಇನ್ನೂರು ರೂಪಾಯಿಗಳನ್ನು ನೀಡಿ ಕೈತೊಳೆದುಕೊಳ್ಳುತ್ತಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ. ನಿಯಮ ಉಲ್ಲಂಘಿಸಿದ ತಪ್ಪಿಗೆ ಒಂದು ತಿಂಗಳ ಸಂಬಳವನ್ನೇ ದಂಡವಾಗಿ ಪಾವತಿಸಬೇಕಾದ ಅನಿವಾರ್ಯ ಹೆಚ್ಚಿನವರಿಗೆ ಬಂದೊದಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.