ನವದೆಹಲಿ: ವೈದಿಕ ವಿಜ್ಞಾನವನ್ನು ಪುನರುಜ್ಜೀವನಗೊಳಿಸುವ ಮತ್ತು ವಿಶ್ವ ಹಿಂದೂ ಪರಿಷತ್ನ ಮಾಜಿ ಮುಖ್ಯಸ್ಥ ದಿವಂಗತ ಅಶೋಕ್ ಸಿಂಘಲ್ ಅವರ ಕೊನೆಯ ಆಶಯಗಳಲ್ಲಿ ಒಂದನ್ನು ಪೂರೈಸುವ ಪ್ರಯತ್ನದ ಭಾಗವಾಗಿ, ವಿಎಚ್ಪಿ ಆರು ದಿನಗಳ ಯಜ್ಞವನ್ನು ನಡೆಸಲು ಸಜ್ಜಾಗಿದೆ. ಮುಂದಿನ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ಯಜ್ಞ ನೆರವೇರಲಿದೆ.
ಅಕ್ಟೋಬರ್ 9 ರಿಂದ ಪ್ರಾರಂಭವಾಗಿ ಅಕ್ಟೋಬರ್ 14 ರಂದು ಯಜ್ಞ ಮುಕ್ತಾಯಗೊಳ್ಳಲಿದೆ. ಆರು ದಿನಗಳ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ಭೈಯಾಜಿ ಜೋಶಿ ಪಾಲ್ಗೊಳ್ಳಲಿದ್ದಾರೆ. ಅವರು ಯಜ್ಞದಲ್ಲೂ ಭಾಗಿಯಾಗಲಿದ್ದಾರೆ.
ದೆಹಲಿಯ ಬಿರ್ಲಾ ದೇವಸ್ಥಾನ ಎಂದೂ ಕರೆಯಲ್ಪಡುವ ಲಕ್ಷ್ಮಿ ನಾರಾಯಣ್ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ವೈದಿಕ ಆಚರಣೆಗಳ ಪ್ರಕಾರ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಉನ್ನತ ಮಟ್ಟದ ಆರ್ಎಸ್ಎಸ್ ಮತ್ತು ವಿಎಚ್ಪಿ ಕಾರ್ಯಕರ್ತರು, ನಾಯಕರು ಭಾಗವಹಿಸಲಿದ್ದಾರೆ.
ಅಯೋಧ್ಯೆಯ ರಾಮ ಜನ್ಮ ಭೂಮಿ ಚಳವಳಿಯ ಉಸ್ತುವಾರಿ ವಹಿಸಿದ್ದ ಸಿಂಘಲ್ ಅವರ ಕೊನೆಯ ಆಶಯಗಳಲ್ಲಿ ಒಂದನ್ನು ಈಡೇರಿಸಲು ಯಜ್ಞವನ್ನು ಆಯೋಜಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಲವಾರು ರಾಜ್ಯಪಾಲರು, ಸಂಪುಟ ಮಂತ್ರಿಗಳು, ವಿವಿಧ ದೇಶಗಳ ರಾಯಭಾರಿಗಳನ್ನು ಸಹ ಆಹ್ವಾನಿಸಲಾಗಿದೆ.
ಪ್ರಧಾನ ಅರ್ಚಕರಾಗಿ ರಾಮಾನುಜ ಜೀಯರ್ ಸ್ವಾಮೀಜಿ ಅವರು ವಿಧಿವಿಧಾನಗಳನ್ನು ನಿರ್ವಹಿಸಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ, ಹೈದರಾಬಾದ್ನಿಂದ ಅವರು ಆಗಮಿಸುತ್ತಿದ್ದಾರೆ.
“ವೈದಿಕ ವಿಜ್ಞಾನದ ಬಗ್ಗೆ ಅರಿವನ್ನು ಮೂಡಿಸಲು ಈ ಯಜ್ಞ ಸಹಕಾರಿಯಾಗಲಿದೆ, ಸಿಂಘಲ್ ಅವರಿದ್ದಾಗಲೇ ಇದನ್ನು ಯೋಜಿಸಲಾಗಿತ್ತು ಆದರೆ ಅವರು ಆಸ್ಪತ್ರೆ ಸೇರಿದ ಹಿನ್ನಲೆಯಲ್ಲಿ ಯೋಜನೆ ಮೊಟಕುಗೊಂಡಿತ್ತು. ಈಗ ಅದನ್ನು ಆಯೋಜನೆಗೊಳಿಸುತ್ತಿದ್ದೇವೆ. ಮೋದಿ ಮತ್ತು ಶಾ ಅವರನ್ನೂ ಆಹ್ವಾನಿಸುತ್ತಿದ್ದೇವೆ” ಎಂದು ವಿಎಚ್ಪಿ ಮುಖಂಡ ಕೋಟೇಶ್ವರ ರಾವ್ ಹೇಳಿದ್ದಾರೆ.
ಯಜ್ಞವನ್ನು ಅಶೋಕ್ ಸಿಂಘಲ್ ಪ್ರತಿಷ್ಠಾನದೊಂದಿಗೆ ಜಂಟಿಯಾಗಿ ನಡೆಸಲಾಗುತ್ತಿದೆ ಎಂದು ವಿಎಚ್ಪಿ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ತಮ್ಮ ಉಪಸ್ಥಿತಿಯನ್ನು ಖಚಿತಪಡಿಸಿದ್ದಾರೆ ಎಂದು ಕಾರ್ಯಕ್ರಮದ ಸಹ ಸಂಘಟಕರೂ ಆಗಿರುವ ಅಶೋಕ್ ಸಿಂಘಲ್ ಪ್ರತಿಷ್ಠಾನದ ಮಹೇಶ್ ಭಾಗಚಂದ್ಕಾ ಹೇಳಿದ್ದಾರೆ.
“ಸಿಂಗ್ ಜೊತೆಗೆ, ಯುಎಸ್, ಹಾಲೆಂಡ್, ಸಿಂಗಾಪುರ್, ಹಾಂಕಾಂಗ್ ಮತ್ತು ಬ್ಯಾಂಕಾಕ್ನ ವಿದೇಶಿ ಗಣ್ಯರು ಸೇರಿದಂತೆ ಹಲವಾರು ಗಣ್ಯರು ತಮ್ಮ ಉಪಸ್ಥಿತಿಯನ್ನು ದೃಢಪಡಿಸಿದ್ದಾರೆ” ಎಂದು ಭಾಗಚಂದ್ಕಾ ಹೇಳಿದ್ದಾರೆ. ಸಾವಿರಾರು ಜನರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.