ನವದೆಹಲಿ: ಭಾರತೀಯ ಸೇನೆಯು ತನ್ನ ಮೊದಲ 100 ಮಹಿಳಾ ಸೈನಿಕರಿಗೆ ಈ ವರ್ಷದ ಡಿಸೆಂಬರ್ನಿಂದ ಬೆಂಗಳೂರಿನಲ್ಲಿ ತರಬೇತಿ ನೀಡಲು ಸಿದ್ಧವಾಗಿದೆ ಎಂದು ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸಾವಿರಾರು ಮಂದಿಯ ಪೈಕಿ 100 ಮಂದಿಯನ್ನು ಆಯ್ಕೆ ಮಾಡಿ ತರಬೇತಿಯನ್ನು ನೀಡಲಾಗುತ್ತಿದೆ. ಪುರುಷ ಸೈನಿಕರಂತೆ ಇವರಿಗೂ 61 ವಾರಗಳ ತರಬೇತಿ ರಿಜಿಮೆನ್ ಇರಲಿದೆ.
ಸೇನೆಯ ಮಿಲಿಟರಿ ಪೊಲೀಸ್ ವಿಭಾಗಕ್ಕೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ಆಗಿನ ರಕ್ಷಣಾ ಸಚಿವೆ ಎನ್ ಸೀತಾರಾಮನ್ ಜನವರಿಯಲ್ಲಿ ಆದೇಶ ನೀಡಿದ್ದರು. ಆ ಬಳಿಕ ಮಹಿಳಾ ಯೋಧೆಯರನ್ನು ನೇಮಿಸುವ ಪ್ರಕ್ರಿಯೆ ಜರುಗಿತ್ತು, ಇದೀಗ ಅವರಿಗೆ ತರಬೇತಿ ಕಾರ್ಯವೂ ಆರಂಭಗೊಂಡಿದೆ. ಮಹಿಳೆಯರನ್ನು ಮಿಲಿಟರಿ ಪೊಲೀಸ್ಗೆ ಹಂತಹಂತವಾಗಿ ಸೇರಿಸಿಕೊಳ್ಳಲಾಗುತ್ತಿದೆ. ಸೇರ್ಪಡೆ ಕಾರ್ಯ ಮುಕ್ತಾಯವಾದ ಬಳಿಕ ಮಿಲಿಟರಿ ಪೊಲೀಸ್ ಕಾರ್ಪ್ಸ್ನಲ್ಲಿ ಮಹಿಳೆಯರ ಪ್ರಮಾಣ ಶೇ.20ರಷ್ಟಾಗಲಿದೆ.
ಸೇನೆಯ ವೈದ್ಯಕೀಯ, ಎಂಜಿನಿಯರಿಂಗ್, ಕಾನೂನುಗಳಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಆದರೀಗ ಅವರನ್ನು ಮಿಲಿಟರಿ ಪೊಲೀಸಿಂಗ್ನಲ್ಲೂ ನಿಯೋಜನೆಗೊಳಿಸಲಾಗಿದೆ. ಪ್ರಸ್ತುತ ಪುರಷರಿಗೆ ಸೀಮಿತವಾಗಿರುವ ಯುದ್ಧ ಕಾರ್ಯಾಚರಣೆಗಳಲ್ಲಿ ಮಹಿಳೆಯರನ್ನೂ ನಿಯೋಜನೆಗೊಳಿಸಲು ಈ ಸೇರ್ಪಡೆ ಪ್ರಮುಖವಾಗಿ ಸಹಾಯಕವಾಗಬಲ್ಲದು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಮಿಲಿಟರಿ ಪೊಲೀಸ್ ಭಾಗವಾಗಿ, ಮಹಿಳಾ ಸೈನಿಕರು ಸೇನಾ ಸಂಸ್ಥೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಾಯ ಮಾಡಲಿದ್ದಾರೆ. ಯುದ್ಧ ಮತ್ತು ಶಾಂತಿಯ ಸಮಯದಲ್ಲಿ ಲಾಜಿಸ್ಟಿಕ್ಸ್ ಮತ್ತು ಸರಬರಾಜುಗಳನ್ನು ನಿರ್ವಹಿಸಲು ಸಹಾಯ ಮಾಡಲಿದ್ದಾರೆ. ಯುದ್ಧ ಕೈದಿಗಳ ಮೇಲೆ ಕಣ್ಗಾವಲು ಇರಿಸಲಿದ್ದಾರೆ, ಸೈನಿಕರ ನಿಯಮಗಳ ಉಲ್ಲಂಘನೆಯನ್ನು ಪರಿಶೀಲಿಸಲು ಸಹಾಯ ಮಾಡಲಿದ್ದಾರೆ. 1700-ಬಲದ ಕೇಡರ್ ಅನ್ನು ವಾರ್ಷಿಕ ಸೇರ್ಪಡೆಯೊಂದಿಗೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.