ನವದೆಹಲಿ: ಸಚಿವಾಲಯಗಳಲ್ಲಿ ಆಪ್ತ ಸಂಬಂಧಿಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಚಿವರುಗಳಿಗೆ ಕಿವಿಮಾತನ್ನು ಹೇಳಿದ್ದಾರೆ.
ಕೇಂದ್ರ ಸಚಿವ ಸಂಪುಟ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮಾಧ್ಯಮಗಳು ಮತ್ತು ಸಾರ್ವಜನಿಕರ ಮುಂದೆ ಮುಜುಗರಕ್ಕೆ ಈಡಾಗುವಂತಹ ಸನ್ನಿವೇಶಗಳನ್ನು ತಂದುಕೊಳ್ಳಬಾರದು, ಹತ್ತಿರದ ಸಂಬಂಧಿಗಳನ್ನು ಸಲಹೆಗಾರರನ್ನಾಗಿ ಅಥವಾ ಬೇರೆ ಇತರ ಕೆಲಸಗಳಿಗೆ ನೇಮಿಸಿಕೊಳ್ಳಬಾರದು ಎಂದು ಸಚಿವರುಗಳಿಗೆ ಹೇಳಿದ್ದಾರೆ.
ಆಡಳಿತಯಂತ್ರದ ವೇಗವರ್ಧನೆ ಮಾಡುವ ಮೂಲಕ ಮತ್ತು ಅಭಿವೃದ್ಧಿಯ ಕಾರ್ಯಗಳ ಮೂಲಕ ಮಾತ್ರ ಕೇಂದ್ರಬಿಂದುವಾಗಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಮತ್ತು ರಾಜ್ಯ ಖಾತೆ ಸಚಿವರುಗಳ ನಡುವಣ ಸಮನ್ವಯ ಉತ್ತಮಗೊಳ್ಳಬೇಕು ಎಂದು ಮೋದಿ ಪ್ರತಿಪಾದಿಸಿದ್ದಾರೆ.
ಸಚಿವಾಲಯದ ಉನ್ನತ ಮಟ್ಟದ ಅಧಿಕಾರಿಗಳ ಜತೆ ನಿರಂತರ ಸಂವಹನ ನಡೆಸುತ್ತಿರಬೇಕು. ಮೇಲಿನ ಹಂತದಿಂದ ಹಿಡಿದು ಕೆಳಹಂತದವರೆಗೂ ಸಚಿವಾಲಯದ ಅಧಿಕಾರಿಗಳ ನಡುವಿನ ಸಂವಹನ ಉತ್ತಮಗೊಳ್ಳಬೇಕಾಗಿದೆ. ನಿರ್ದೇಶಕರು, ಸಹಾಯಕ ಕಾರ್ಯದರ್ಶಿಗಳು ಕೂಡಾ ನಿಮ್ಮ ತಂಡದ ಭಾಗವಾಗಬೇಕು ಎಂದು ಮೋದಿ ಸಚಿವರುಗಳಿಗೆ ಹೇಳಿದ್ದಾರೆ.
ಬೆಳಿಗ್ಗೆ 9:30 ರ ಹೊತ್ತಿಗೆ ಸಚಿವರು, ಅಧಿಕಾರಿಗಳು ಕಛೇರಿ ತಲುಪಬೇಕು ಎಂದು ಪುನರುಚ್ಚರಿಸಿರುವ ಮೋದಿ, ಕೆಲವರು ಈ ಸೂಚನೆಗೆ ಇನ್ನಷ್ಟೇ ಕಿವಿಗೊಡಬೇಕಿದೆ ಮತ್ತು ಕಿವಿಗೊಡುವ ಕಾರ್ಯವನ್ನು ಈಗಿನಿಂದಲೇ ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ.
ಶಿಸ್ತುಬದ್ಧ ದಿನಚರಿಯನ್ನು ಕಾಪಾಡಿಕೊಳ್ಳಲು ಹೆಸರುವಾಸಿಯಾಗಿರುವ ಮೋದಿಯವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಶಿಸ್ತು, ಸಮಯಪ್ರಜ್ಞೆ ಮತ್ತು ಕೆಲಸ ಮಾಡುವ ಬದ್ಧತೆಯ ದೃಷ್ಟಿಯಿಂದ ಉತ್ತಮ ಉದಾಹರಣೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.