ಮಂಗಳೂರು: ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬುಧವಾರ ಬೆಳಗ್ಗೆ ಮಂಗಳೂರಿನಲ್ಲಿ ಅಭೂತಪೂರ್ವವಾದ ಸ್ವಾಗತವನ್ನು ಕೋರಲಾಗಿದೆ. ಕೇರಳದಿಂದ ಮಂಗಳೂರಿಗೆ ಆಗಮಿಸುತ್ತಿದ್ದಂತೆ ರೈಲ್ವೇ ನಿಲ್ದಾಣದಲ್ಲಿ ನೆರೆದಿದ್ದ ಭಾರೀ ಪ್ರಮಾಣದ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಿದ್ದಾರೆ.
ಕೇರಳ ಸಹ ಉಸ್ತುವಾರಿಯಾಗಿರುವ ಅವರು ಕೇರಳ ಪ್ರವಾಸದಲ್ಲಿದ್ದರು. ಇಂದು ಬೆಳಗ್ಗೆ ಅಲ್ಲಿಂದ ಅವರು ರೈಲಿನ ಮೂಲಕ ಮಂಗಳೂರಿಗೆ ಆಗಮಿಸಿದರು. ಈ ವೇಳೆ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, “ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡುತ್ತೇನೆ. ಪಕ್ಷದ ಎಲ್ಲ ಹಿರಿಯರ ಮಾರ್ಗದರ್ಶನ ಹಾಗೂ ಸಲಹೆಗಳನ್ನು ಪಡೆದು ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಸಧೃಡಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹೊಸ ಹುಮ್ಮಸ್ಸಿನಿಂದ ಎಲ್ಲರ ಜತೆಗೂಡಿ ಸಧೃಡ ಬಿಜೆಪಿ ಕಟ್ಟುವುದು ನನ್ನ ಆಶಯ” ಎಂದಿದ್ದಾರೆ.
“ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಸಿಗುತ್ತದೆ, ರಾಜ್ಯಾಧ್ಯಕ್ಷ ಪಟ್ಟ ಸಿಗುತ್ತದೆ ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಬಿಜೆಪಿಯಲ್ಲಿ ಕೆಲಸ ಮಾಡುವ ಕಾರ್ಯಕರ್ತರನ್ನು ಗುರುತಿಸಲಾಗುತ್ತದೆ. ಸಿಎಂ ಯಡಿಯೂರಪ್ಪ ಅವರು ನನಗೆ ಸಹಕಾರ, ಮಾರ್ಗದರ್ಶನ ನೀಡುತ್ತಾರೆ” ಎಂದು ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರು ದಕ್ಷಿಣ ಕನ್ನಡದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾದವರು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ ಅವರು ಇಂದು ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.