ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ, ಮಸೂದೆಯ ಪರವಾಗಿ 147 ಮತಗಳು ಬಿದ್ದಿದ್ದು, 42 ಮತಗಳು ವಿರೋಧವಾಗಿ ಬಿದ್ದಿದೆ. ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಗುರುತಿಸುವ ಬಗ್ಗೆ ತರಲಾದ ತಿದ್ದುಪಡಿಯನ್ನು ಗೃಹಸಚಿವ ಅಮಿತ್ ಶಾ ಅವರು ಸಮರ್ಥಿಸಿಕೊಂಡಿದ್ದು, ಭಯೋತ್ಪಾದಕ ಸಂಘಟನೆಗಳ ನಿಷೇಧದ ಬಳಿಕ ವ್ಯಕ್ತಿಗಳು ಮತ್ತೊಂದು ಸಂಘಟನೆ ಸ್ಥಾಪಿಸುವುದನ್ನು ಇದು ತಡೆಗಟ್ಟುತ್ತದೆ ಎಂದಿದ್ದಾರೆ.
“ಭಯೋತ್ಪಾದನೆಗೆ ಧರ್ಮವಿಲ್ಲ, ಭಯೋತ್ಪಾದನೆ ಮಾನವೀಯತೆಗೆ ವಿರುದ್ಧವಾದುದು, ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಈ ಮಸೂದೆಯನ್ನು ಎಲ್ಲರೂ ಬೆಂಬಲಿಸಬೇಕು. ವ್ಯಕ್ತಿಗಳ ಹಕ್ಕುಗಳನ್ನು ಉಲ್ಲಂಘಿಸುವ ಪ್ರಮೇಯವೇ ಇಲ್ಲಿ ಇಲ್ಲ” ಎಂದಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆಯಾಗಬಾರದು ಎಂಬ ಕಾರಣಕ್ಕೆ ತಿದ್ದುಪಡಿ ಮಸೂದೆಯನ್ನು ನಾಲ್ಕು ಸುತ್ತು ಪರಿಶೀಲನೆ ನಡೆಸಲಾಗಿದೆ ಎಂದಿದ್ದಾರೆ.
“ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಗುರುತಿಸುವ ಅಗತ್ಯವಿದೆ, ಇಲ್ಲವಾದರೆ ಅವರು ಉಗ್ರ ಸಂಘಟನೆ ನಿಷೇಧವಾದ ಬಳಿಕ ಮತ್ತೊಂದು ಸಂಘಟನೆಯನ್ನು ಹುಟ್ಟು ಹಾಕುತ್ತಾರೆ. ಎಲ್ಲಿಯತನಕ ಸಂಘಟನೆಗಳನ್ನು ನಿಷೇಧಿಸುತ್ತಾ ಇರುವುದು?” ಎಂದಿದ್ದಾರೆ.
ಈ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ಕೆಲ ಪ್ರತಿಪಕ್ಷಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದು, ಇದು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತದೆ ಎಂದು ಪ್ರತಿಪಾದಿಸಿವೆ. ಈ ಆರೋಪಕ್ಕೆ ಅಮಿತ್ ಶಾ ಅವರು ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದು, ತುರ್ತು ಪರಿಸ್ಥಿತಿಯನ್ನು ಹೇರಿದ್ದವರು ಇಂದು ಕಾನೂನುಗಳ ಉಲ್ಲಂಘನೆಯ ಬಗ್ಗೆ ನಮಗೆ ಪಾಠ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.