ನವದೆಹಲಿ: ದುಬೈನಿಂದ ನವದೆಹಲಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಮುಂಜಾನೆ ಬಂದಿಳಿದ ಐಎಂಎ ಬಹು ಕೋಟಿ ಹಗರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ನನ್ನು ಜಾರಿ ನಿರ್ದೇಶನಾಲಯ ಮತ್ತು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದು ತನಿಖೆಗೊಳಪಡಿಸಿದ್ದಾರೆ.
ಖಾನ್ನನ್ನು ದೆಹಲಿಯ ಎಂಟಿಎನ್ಎಲ್ ಕಟ್ಟಡದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಐಎಂಎ(ಐ ಮಾನಿಟರಿ ಅಡ್ವೈಸರಿ)ಯ ಮುಖ್ಯಸ್ಥನಾಗಿರುವ ಮನ್ಸೂರ್ ಖಾನ್ ಜನರಿಂದ ಕೋಟ್ಯಾಂತರ ರೂಪಾಯಿಗಳನ್ನು ದೋಚಿ ದುಬೈಗೆ ಪರಾರಿಯಾಗಿದ್ದ. ಈತ ಮತ್ತು ಈತನ ಸಂಸ್ಥೆಯ ವಿರುದ್ಧ ಹಣಕಾಸು ವಂಚನೆ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಅಲ್ಲದೇ ಈತನ ವಿರುದ್ಧ ಇಂಟರ್ಪೋಲ್ ಬ್ಲೂಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು.
ಸಂಸ್ಥೆಯ ವಂಚನೆ ಬಗ್ಗೆ ತನಿಖೆ ನಡೆಸಲು ಕರ್ನಾಟಕ ಸರ್ಕಾರವು ಡಿಐಜಿ ಬಿ ಆರ್ ರವಿಕಾಂತ ಗೌಡರ ನೇತೃತ್ವದಲ್ಲಿ 11 ಸದಸ್ಯರ ಎಸ್ಐಟಿಯನ್ನು ರಚಿಸಿತು. ಇಡಿ ಮತ್ತು ಎಸ್ಐಟಿ ಇಬ್ಬರೂ ಆತನ ವಿರುದ್ಧ ಲುಕ್ಔಟ್ ನೋಟಿಸ್ ನೀಡಿದ್ದರು.
ದುಬೈನಲ್ಲಿ ತಲೆ ಮರೆಸಿಕೊಂಡಿದ್ದ ಮನ್ಸೂರ್ ಖಾನ್, ತನಗೆ ಜೀವ ಬೆದರಿಕೆ ಇದೆ, ಪೊಲೀಸರು ಮತ್ತು ತನಿಖಾಧಿಕಾರಿಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ಭದ್ರತೆ ನೀಡಿದರೆ ತಾನು ಶರಣಾಗಲು ಸಿದ್ಧ ಎಂದು ಹೇಳಿದ್ದ. ಕೊನೆಗೂ ಅಧಿಕಾರಿಗಳು ಆತನಿರುವ ಸ್ಥಳವನ್ನು ಪತ್ತೆ ಹಚ್ಚಿ, ಆತನಿಗೆ ಸೂಕ್ತ ಭದ್ರತೆಯ ಭರವಸೆ ನೀಡಿ ದೆಹಲಿಗೆ ಬರುವಂತೆ ಮಾಡಿದ್ದಾರೆ ಎನ್ನಲಾಗಿದೆ. ಅದರಂತೆ ಇಂದು ಆತ ದೆಹಲಿಗೆ ಆಗಮಿಸಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿಯೇ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಇಂದು ಆತನನ್ನು ಬೆಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಎಸ್ಐಟಿ ಮತ್ತು ಇಡಿ ಜಂಟಿಯಾಗಿ ಈತನ ವಿರುದ್ಧ ತನಿಖೆಯನ್ನು ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.