ಭೋಪಾಲ್: ಮಧ್ಯಪ್ರದೇಶದಲ್ಲಿ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವ ಸಲುವಾಗಿ ಐಎಎಸ್ ಅಧಿಕಾರಿಗಳು ಮತ್ತು ಎಸ್ಎಎಸ್ ಅಧಿಕಾರಿಗಳು ಪಾರ್ಟ್ಟೈಮ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸರ್ಕಾರಿ ಶಾಲೆಗಳಲ್ಲಿ ಸುಮಾರು 50 ಮಂದಿ ಅಧಿಕಾರಿಗಳು ಇದರಲ್ಲಿ 40 ಮಂದಿ ಸೇವಾನಿರತ ಅಧಿಕಾರಗಳು ಪಾಠ ಮಾಡುತ್ತಿದ್ದಾರೆ.
ಸೋಮವಾರ ಸುಮಾರು 17 ಮಂದಿ ಐಎಎಸ್ ಅಧಿಕಾರಿಗಳು 17 ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದಾರೆ.
“ಪಾರ್ಟ್ಟೈಮ್ ಶಿಕ್ಷಕರಾಗಿ ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡುವ ಕಾರ್ಯಕ್ಕೆ ಕನಿಷ್ಠ 50 ಮಂದಿ ಅಧಿಕಾರಿಗಳು ಕೈಜೋಡಿಸಿದ್ದಾರೆ. ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಬೆಳಗ್ಗೆ ಕಛೇರಿ ಅವಧಿಗೂ ಮುನ್ನ ಎರಡು ಗಂಟೆಗಳ ಕಾಲ ಅವರು ಪಾಠವನ್ನು ಮಾಡಲಿದ್ದಾರೆ” ಎಂದು ಈ ಕಾರ್ಯಕ್ರಮವನ್ನು ಆರಂಭಿಸಿದ ಐಎಎಸ್ ಅಧಿಕಾರಿ ತರುಣ್ ಪಿಥೋಡ್ ಹೇಳಿದ್ದಾರೆ.
ಶಿಕ್ಷಕರನ್ನು ಸ್ಥಾನವನ್ನು ತುಂಬಲು ಈ ಕೆಲಸವನ್ನು ನಾವು ಮಾಡುತ್ತಿಲ್ಲ, ಬದಲಾಗಿ ಶಿಕ್ಷಕರ ಹೊರೆಯನ್ನು ತಗ್ಗಿಸಲು ಈ ಕಾರ್ಯ ಮಾಡುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಸುಮಾರು 50 ಅಧಿಕಾರಿಗಳು ಆಸಕ್ತಿಯನ್ನು ತೋರಿಸಿದ್ದರಿಂದ ನಾವು ರೋಸ್ಟರ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಹೊರಟಿದ್ದೇವೆ. ಯಾಕೆಂದರೆ ಪ್ರತಿಯೊಬ್ಬರಿಗೂ ಪ್ರತಿದಿನ ತರಗತಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುದಿಲ್ಲ” ಎಂದು ಪಿಥೋಡ್ ಹೇಳಿದ್ದಾರೆ.
“ಶಿಕ್ಷಣ ವ್ಯವಸ್ಥೆಯಲ್ಲಿ ನಿಜವಾದ ಬದಲಾವಣೆಯನ್ನು ತರುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ. ನಾವು ಬೋಧನೆ ಮಾಡುವ ಅಧಿಕಾರಿಗಳ ಹೆಸರನ್ನು ಬಹಿರಂಗ ಮಾಡುವುದಿಲ್ಲ. ಆದರೆ ಬೋಧಿಸಲು ತರಗತಿಗಳಿಗೆ ಬಂದಾಗ ಜನರಿಗೇ ಅವರು ಯಾರು ಎಂದು ತಿಳಿಯುತ್ತದೆ. ಈ ಕಾರ್ಯಕ್ರಮಕ್ಕೆ ಪ್ರಚಾರ ಪಡೆಯಲು ನಾವೆಂದೂ ಬಯಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಈ ಕಾರ್ಯಕ್ರಮ ಭಾಗವಾಗಿರುವ ಶಾಲಾ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಧರ್ಮೇಂದ್ರ ಶರ್ಮಾ ಅವರು, “ಉನ್ನತ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಸೇರಿಕೊಂಡರೆ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ಸಹಾಯವಾಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾರ್ಯಕ್ರಮದಿಂದ ಸಂತೋಷವಾಗಿದ್ದಾರೆ ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.