ನ್ಯೂಯಾರ್ಕ್: ಜಾಗತಿಕ ವೇದಿಕೆಯಲ್ಲಿ ಮಂಗಳವಾರ ಭಾರತವು ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧದ ನಡುವಣ ಸಂಬಂಧವನ್ನು ಎತ್ತಿ ತೋರಿಸಿದೆ, ಇವೆರಡರ ಸಹಬಾಳ್ವೆ ಮತ್ತು ರೂಪಾಂತರವು ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಹೇಗೆ ದೊಡ್ಡ ಅಪಾಯವನ್ನುಂಟು ಮಾಡುತ್ತಿದೆ ಎಂಬುದನ್ನು ವಿವರಿಸಿದೆ. ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ಆಗಿರುವ ದಾವೂದ್ ಇಬ್ರಾಹಿಂ ಪ್ರಕರಣವನ್ನು ಉಲ್ಲೇಖ ಮಾಡಿರುವ ಭಾರತ, ಆತನ ಕ್ರಿಮಿನಲ್ ಸಿಂಡಿಕೇಟ್ ಡಿ-ಕಂಪನಿ ಹೇಗೆ ಅಪಾಯಕಾರಿ ಭಯೋತ್ಪಾದಕ ಜಾಲವಾಗಿ ರೂಪಾಂತರಗೊಂಡಿದೆ ಎಂಬುದನ್ನು ವಿವರಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಭಾರತದ ಯುಎನ್ ರಾಯಭಾರಿ ಮತ್ತು ಯುಎನ್ನ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು, “ನಮ್ಮ ಪ್ರದೇಶದಲ್ಲಿ, ಡಿ-ಕಂಪನಿ ಎಂದು ಕರೆಯಲ್ಪಡುವ ದಾವೂದ್ ಇಬ್ರಾಹಿಂನ ಕ್ರಿಮಿನಲ್ ಸಿಂಡಿಕೇಟ್ ಹೇಗೆ ಭಯೋತ್ಪಾದಕ ಜಾಲವಾಗಿ ಪರಿವರ್ತನೆಗೊಂಡಿತು ಎಂಬುದನ್ನು ನಾವು ನೋಡಿದ್ದೇವೆ. ಡಿ-ಕಂಪನಿಯ ಅಕ್ರಮ ಆರ್ಥಿಕ ಚಟುವಟಿಕೆಗಳು ಹೊರ ಜಗತ್ತಿಗೆ ಅಷ್ಟಾಗಿ ಗೊತ್ತಿಲ್ಲ, ಆದರೆ , ಚಿನ್ನ ಕಳ್ಳಸಾಗಣೆ, ನಕಲಿ ಕರೆನ್ಸಿ, ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಮುಂತಾದವುಗಳನ್ನು ಅದು ಎಗ್ಗಿಲ್ಲದೆ ನಡೆಸುತ್ತಿದೆ. ಇಬ್ರಾಹಿಂನ ಅಸ್ತಿತ್ವವನ್ನು ನಿರಾಕರಿಸುವ ಸುರಕ್ಷಿತ ತಾಣವೊಂದರ ಮೂಲಕ ಆತನ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ನಿಜಕ್ಕೂ ಅಪಾಯಕಾರಿ” ಎಂದಿದ್ದಾರೆ.
‘ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಗಳು: ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ನಡುವಿನ ಸಂಪರ್ಕಗಳು’ ಕುರಿತ ಮುಕ್ತ ಚರ್ಚೆಯಲ್ಲಿ ಅಕ್ಬರುದ್ದೀನ್ ಭಾಗವಹಿಸಿ ಮಾತನಾಡಿದರು.
ಭೂಗತನಾಗಿರುವ ಮತ್ತು ಅಪಾಯಕಾರಿಯಾಗಿರುವ ಭಯೋತ್ಪಾದಕ ದಾವೂದ್ ಇಬ್ರಾಹಿಂ 1993 ರಲ್ಲಿ ಮುಂಬಯಿ ಸರಣಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಸ್ಪೋಟದಲ್ಲಿ 200 ಕ್ಕೂ ಹೆಚ್ಚು ಜನರ ಹತ್ಯೆಯಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಯುಎಸ್ ಮತ್ತು ಭಾರತ ಎರಡೂ ಅವನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿವೆ. ಆತನ ತಲೆಯ ಮೇಲೆ 25 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಘೋಷಿಸಲಾಗಿದೆ’
ನೆರೆಯ ಪಾಕಿಸ್ಥಾನದಲ್ಲೇ ಈತ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ಇದೆಯಾದರೂ ಪಾಕಿಸ್ಥಾನ ಮಾತ್ರ ಈತನ ಅಸ್ತಿತ್ವವನ್ನು ಅಲ್ಲಗೆಳೆಯುತ್ತಲೇ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.