ಲಕ್ನೋ: ಉತ್ತರ ಪ್ರದೇಶದ ಲಕ್ನೋ ಶೀಘ್ರದಲ್ಲೇ ಭಿಕ್ಷುಕ ಮುಕ್ತ ನಗರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಲಕ್ನೋ ಮುನ್ಸಿಪಲ್ ಕಾರ್ಪೋರೇಶನ್(ಎಲ್ ಎಂಸಿ) ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಿದ್ದು, ದೈಹಿಕವಾಗಿ ಸದೃಢರಾಗಿರುವ ಭಿಕ್ಷುಕರನ್ನು ದಿನಗೂಲಿ ಕಾರ್ಮಿಕರನ್ನಾಗಿಸಲು ಮುಂದಾಗಿದೆ. ಆರೋಗ್ಯವಾಗಿದ್ದರೂ ಕೆಲಸ ಮಾಡದೆ ಭಿಕ್ಷಾಟನೆಗೆ ಮುಂದಾಗುವ ಜನರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಯೋಜನೆಯಾಗಿದೆ.
ಮುನ್ಸಿಪಲ್ ಕಮಿಷನರ್ ಇಂದ್ರಮನಿ ತ್ರಿಪಾಠಿ ಅವರು ಆಯೋಜಿಸಿದ್ದ ಒಂದು ತಿಂಗಳ ಸಮೀಕ್ಷೆಯಲ್ಲಿ, ಲಕ್ನೋದಲ್ಲಿ 4,500 ಭಿಕ್ಷುಕರು ಇದ್ದಾರೆ ಎಂಬುದು ತಿಳಿದು ಬಂದಿದೆ. ಇದರಲ್ಲಿ ದೈಹಿಕವಾಗಿ ಸಮರ್ಥರಿರುವ ಭಿಕ್ಷುಕರಿಗೆ ಕೆಲಸ ನೀಡುವ ಯೋಜನೆಯನ್ನು ರೂಪಿಸಲಾಯಿತು. ಮೊದಲ ಹಂತವಾಗಿ 45 ಮಂದಿ ಭಿಕ್ಷುಕರನ್ನು ಆರಿಸಿ, ಅವರಿಗೆ ಕೆಲಸವನ್ನು ನೀಡಲಾಗಿದೆ.
“ಹಲವಾರು ಮಂದಿ ಭಿಕ್ಷುಕರು ದೈಹಿಕವಾಗಿ ಸಮರ್ಥರಿದ್ದಾರೆ. ಆದರೂ ಕೆಲಸ ಮಾಡಲು ಮನಸ್ಸಿಲ್ಲದೆ ಹಣ ಮಾಡುವ ಸುಲಭದ ಮಾರ್ಗವನ್ನು ಕಂಡುಕೊಂಡಿದ್ದಾರೆ” ಎಂದು ಇಂದ್ರಮನಿ ಹೇಳುತ್ತಾರೆ.
ಎರಡನೇಯ ಹಂತದಲ್ಲಿ ಮತ್ತೆ 45 ಮಂದಿ ಭಿಕ್ಷುಕರಿಗೆ ಎನ್ಜಿಓ ಕಡೆಯಿಂದ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.
“ಎನ್ಜಿಓ ಇವರಿಗೆ ಸ್ವಚ್ಛತೆ ಮತ್ತು ತ್ಯಾಜ್ಯ ಸಂಗ್ರಹಣೆಯ ಕೆಲಸ ನೀಡಲಿದೆ. ಭಿಕ್ಷುಕರಿಗೆ ಉದ್ಯೋಗ ನೀಡುವುದು ಮತ್ತು ನಗರವನ್ನು ಭಿಕ್ಷುಕ ಮುಕ್ತವಾಗಿಸುವುದು ನಮ್ಮ ಗುರಿ. ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಲಕ್ನೋಗೆ ಭಿಕ್ಷಾಟನೆ ಕೆಟ್ಟ ಹೆಸರು ತರುತ್ತಿದೆ” ಎಂದಿದ್ದಾರೆ.
“ಮುಂಬೈನಲ್ಲಿ ಭಿಕ್ಷಾಟನೆಯನ್ನು ಕಾನೂನುಬಾಹಿರವೆಂದು ಘೋಷಿಸಲಾಗಿದೆ. ನಮ್ಮಲ್ಲಿ ಅಂತಹ ಕಾನೂನು ಇಲ್ಲ ಆದರೆ ನಾವು ರಾಜ್ಯ ಸರ್ಕಾರದಿಂದ ಕಾನೂನು ತರಲು ಅಭಿಪ್ರಾಯವನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳನ್ನು ಪರಿಶೀಲಿಸುತ್ತಿದ್ದೇವೆ, ಅದರ ಅಡಿಯಲ್ಲಿ ಭಿಕ್ಷಾಟನೆಯನ್ನು ನಡೆಸುವವರ ವಿರುದ್ಧ ನಾವು ಎಫ್ಐಆರ್ ದಾಖಲಿಸಬಹುದು ”ಎಂದು ಅವರು ಹೇಳಿದ್ದಾರೆ.
“ಓದಲು ಮತ್ತು ಬರೆಯಲು ತಿಳಿದಿರುವ ಕೆಲವು ಭಿಕ್ಷುಕರನ್ನು ಆದಾಯ ಸಂಗ್ರಹದಂತಹ ಇತರ ಕೆಲಸಗಳಿಗೆ ನೇಮಿಸಲಾಗುವುದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.