ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು. 2019ರ ಲೋಕಸಭಾ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಚುನಾವಣಾ ಆಯೋಗಕ್ಕೆ ಅಭಿನಂದನೆಗಳನ್ನು ತಿಳಿಸಿದರು. 61 ಕೋಟಿ ಜನರು ಈ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ ಮತ್ತು ಸ್ಪಷ್ಟ ಜನಾದೇಶವನ್ನು ನೀಡಿದ್ದಾರೆ ಎಂದ ಅವರು, ಭಾರೀ ಪ್ರಮಾಣದಲ್ಲಿ ಮತದಾನ ಮಾಡಿದ ಮಹಿಳೆಯರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನನ್ನ ಸರ್ಕಾರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಗಾಗಿ ದುಡಿಯುತ್ತಿದೆ, ಒತ್ತಡ ಮುಕ್ತರಾಗಿ ಜನರು ಬದುಕುವ ಪ್ರಬುದ್ಧ ಭಾರತವನ್ನು ನಿರ್ಮಾಣ ಮಾಡಲು ಶ್ರಮಿಸುತ್ತಿದೆ. ಪ್ರತಿ ಭಾರತೀಯರನ್ನು ಸಬಲೀಕರಣ ಮಾಡುವುದು ನಮ್ಮ ಗುರಿ. ಈ ಪಯಣ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ನಿಂದ ಪ್ರೇರಿತಗೊಂಡಿದೆ. ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದರು.
ಮುಂದಿನ ಪೀಳಿಗೆಗೆ ನಾವು ನೀರಿನ ಸಂರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ, ಪ್ರತ್ಯೇಕ ಜಲ ಶಕ್ತಿ ಸಚಿವಾಲಯವನ್ನು ನಿರ್ಮಾಣ ಮಾಡಿದ್ದು ಮಹತ್ವದ ಹೆಜ್ಜೆ. ದೇಶದ 112 ಆಶಯ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದೆ ಎಂದರು.
ಮುಂಬರುವ ವರ್ಷಗಳಲ್ಲಿ, ರೂ.25 ಲಕ್ಷ ಕೋಟಿಗಳ ಹೂಡಿಕೆಯನ್ನು ಮಾಡಲಾಗುತ್ತದೆ ಮತ್ತು 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವಾರು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು. ಭಾರತವನ್ನು ಆರ್ಥಿಕ ಶಕ್ತಿಯನ್ನಾಗಿ ಮಾಡುವುದು ಸರ್ಕಾರದ ಗುರಿ ಎಂದರು.
ಮಧ್ಯಮವರ್ಗವನ್ನು ರಕ್ಷಿಸುವುದು ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವುದು ನಮ್ಮ ಸರ್ಕಾರದ ಅಜೆಂಡಾ ಎಂದರು.
ಯುವಕರ ಆಶೋತ್ತರಗಳನ್ನು ಈಡೇರಿಸಲು ಅವರನ್ನು ಸರ್ಕಾರದ ಪ್ರಕ್ರಿಯೆಯಲ್ಲಿ ಒಳಪಡಿಸುವುದು ಬಹುಮುಖ್ಯ ಎಂದರು. ಜಗತ್ತಿನಲ್ಲಿ ಅತೀಹೆಚ್ಚು ಸ್ಟಾರ್ಟ್ ಅಪ್ಗಳನ್ನು ಹೊಂದಿರುವ ದೇಶ ಭಾರತವಾಗಿದೆ. ಭಾರತವನ್ನು 5 ಟ್ರಿಲಿಯನ್ ಎಕಾನಮಿ ಮಾಡುವತ್ತ ಸರ್ಕಾರ ಪ್ರಯತ್ನ ಆರಂಭಿಸಿದೆ ಎಂದರು.
5 ವರ್ಷದಲ್ಲಿ 7.3 ಲಕ್ಷ ರೂಪಾಯಿಗಳನ್ನು ಜನರಿಗೆ ನೇರ ಲಾಭ ವರ್ಗಾವಣೆ ಮಾಡಲಾಗಿದೆ, 8 ಕೋಟಿ ನಕಲಿ ಫಲಾನುಭವಿಗಳನ್ನು ತೊಡೆದು ಹಾಕಿದ ಹಿನ್ನಲೆಯಲ್ಲಿ 1.41 ಲಕ್ಷ ಕೋಟಿ ಉಳಿತಾಯವಾಗಿದೆ ಎಂದರು.
ರಕ್ಷಣಾ ಪಡೆಗಳನ್ನು ಬಲಿಷ್ಠಗೊಳಿಸಲು ಮಹತ್ವ ಕಾರ್ಯಗಳನ್ನು ಸರ್ಕಾರ ಮಾಡುತ್ತಿದ್ದು, ಈ ವರ್ಷ ರಫೆಲ್ ಯುದ್ಧ ವಿಮಾನ ಮತ್ತು ಅಪಾಚೆ ಹೆಲೆಕಾಫ್ಟರ್ ಅನ್ನು ಹೊಂದಲಿದ್ದೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.