ಬೆಂಗಳೂರು: ಹಲವಾರು ಗೊಂದಲ, ಭಿನ್ನಾಭಿಪ್ರಾಯಗಳು ನಡುವೆಯೂ ಶುಕ್ರವಾರ ರಾಜ್ಯ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೊಂಡಿದೆ. ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ನೂತನ ಸಚಿವರುಗಳಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ. ಇವರಿಬ್ಬರೂ ಪಕ್ಷೇತರ ಶಾಸಕರು ಎಂಬುದು ವಿಶೇಷ.
ರಾಜಭವನದ ಗಾಜಿನ ಮನೆಯಲ್ಲಿ ಸರಳವಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭ ಜರುಗಿದ್ದು, ರಾಜ್ಯಪಾಲ ವಜುಭಾಯ್ ವಾಲಾ ಅವರು ನೂತನ ಸಚಿವರುಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಇದರಲ್ಲಿ ಭಾಗಿಯಾಗಿದ್ದರು.
ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಆರ್.ಶಂಕರ್ ಇಂದು ಮತ್ತೊಮ್ಮೆ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವ ಮುನ್ನ ಆರ್. ಶಂಕರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ತಮ್ಮ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯನ್ನು (ಕೆಪಿಜೆಪಿ) ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸುವ ಪತ್ರ ನೀಡಿದರು.
ಶಂಕರ್ ಅವರು ರಾಣೆಬೆನ್ನೂರು ಕ್ಷೇತ್ರವನ್ನು ಮತ್ತು ನಾಗೇಶ್ ಮುಳುಬಾಗಿಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಜೆಡಿಎಸ್ ಕೋಟಾದ ಮತ್ತೊಂದು ಖಾತೆಯನ್ನು ಬಿಎಂ ಫಾರೂಖ್ ಅವರಿಗೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು, ಆದರೆ ಅಂತಿಮ ಕ್ಷಣದಲ್ಲಿ ಅವರ ಹೆಸರನ್ನು ಕೈ ಬಿಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.