ನವದೆಹಲಿ: ವಿಶ್ವದ ಅತ್ಯುನ್ನತ ಶಿಖರವನ್ನೇರಿರುವ ಉತ್ತರಪ್ರದೇಶ ಕೇಡರ್ನ ಐಎಎಸ್ ಅಧಿಕಾರಿ ರವೀಂದ್ರ ಕುಮಾರ್ ಅವರು, ಎವರೆಸ್ಟ್ನ ತುತ್ತತುದಿಯಿಂದಲೇ ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ. ಅದುವೇ ಗಂಗೆಯನ್ನು ಉಳಿಸಿ, ಸಂರಕ್ಷಿಸಿ ಎಂಬುದು. ಗಂಗಾ ಜಲವನ್ನು ಜೊತೆಗಿಟ್ಟುಕೊಂಡೇ ಅವರು ಎವರೆಸ್ಟ್ ಏರಿದ್ದು ಮತ್ತೊಂದು ವಿಶೇಷ.
ಭಾರತ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದಲ್ಲಿ ಪ್ರಸ್ತುತ ನೇಮಕಾತಿಗೊಂಡಿರುವ ಅವರು, ಮೇ 23 ರಂದು ಎವರೆಸ್ಟ್ ತುತ್ತತುದಿಯನ್ನು ತಲುಪಿದ್ದಾರೆ. ತಮ್ಮ ಪರ್ವತಾರೋಹಣವನ್ನು ಅವರು “ಸ್ವಚ್ಛ ಗಂಗಾ ಸ್ವಚ್ಛ ಭಾರತ್ ಎವರೆಸ್ಟ್ ಅಭಿಯಾನ್ 2019” ಎಂದು ಕರೆದುಕೊಂಡಿದ್ದಾರೆ. ವಿಶ್ವದ ಅತೀದೊಡ್ಡ ಶಿಖರಕ್ಕೆ ಗಂಗಾ ಜಲವನ್ನು ತೆಗೆದುಕೊಂಡು ಹೋದ ಕೀರ್ತಿಯೂ ಅವರದ್ದಾಗಿದೆ.
ತಮ್ಮ ಪರ್ವತಾರೋಹಣವನ್ನು ಜಲ ಮಾಲಿನ್ಯದ ವಿರುದ್ಧದ ಅಭಿಯಾನವನ್ನಾಗಿಸಿದ ಅವರು, ನದಿಗಳನ್ನು ಮತ್ತು ನೀರಿನ ಮೂಲಗಳನ್ನು ಸಂರಕ್ಷಿಸಬೇಕು ಎಂಬ ಸಂದೇಶವನ್ನು ಎವರೆಸ್ಟ್ ತುತ್ತತುದಿಯಿಂದಲೇ ಎಲ್ಲರಿಗೂ ರವಾನಿಸಿದ್ದಾರೆ.
ಎರಡನೇಯ ಬಾರಿಗೆ ರವೀಂದ್ರ ಕುಮಾರ್ ಅವರು ಎವರೆಸ್ಟ್ ಅನ್ನು ಏರಿದ್ದು, ಮೊದಲ ಬಾರಿಗೆ 2013ರಲ್ಲಿ ಅವರು ಈ ಸಾಧನೆಯನ್ನು ಮಾಡಿದ್ದರು. ಈ ಮೂಲಕ ಮೌಂಟ್ ಎವರೆಸ್ಟ್ ಹತ್ತಿದ ದೇಶದ ಮೊದಲ ಮತ್ತು ಏಕೈಕ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದಲ ಬಾರಿ ನೇಪಾಳ ಮಾರ್ಗವಾಗಿ ಅವರು ಎವರೆಸ್ಟ್ ಹತ್ತಿದ್ದರು, ಈ ಬಾರಿ ಅವರು ಚೀನಾ ರಸ್ತೆ ಮೂಲಕ ಎವರೆಸ್ಟ್ ಹತ್ತಿದ್ದಾರೆ. ಈ ಮೂಲಕ ಎರಡೂ ಮಾರ್ಗಗಳಿಂದ ಎವರೆಸ್ಟ್ ಹತ್ತಿದ ಕೆಲವೇ ಕೆಲವು ಭಾರತೀಯ ಪೈಕಿ ಒಬ್ಬರು ಎನಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.