ನವದೆಹಲಿ: ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಓರ್ವ ಭಯೋತ್ಪಾದಕ ನೆಲಕ್ಕುರುಳಿದ್ದಾನೆ.
ಎನ್ಕೌಂಟರ್ ಬಳಿಕ, ಪೊಲೀಸರು ಸಂಪೂರ್ಣ ಪ್ರದೇಶವನ್ನು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಒಂದು ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೃತಪಟ್ಟ ಉಗ್ರನ ಗುರುತು ಮತ್ತು ಆತ ಯಾವ ಸಂಘಟನೆಗೆ ಸೇರಿದವನು ಎಂಬ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಶೋಪಿಯಾನದ ಝನಪೋರಾ ಪ್ರದೇಶದಲ್ಲಿ ಬುಧವಾರ ಅಪರಿಚಿತ ಶಸ್ತ್ರಧಾರಿಯೊಬ್ಬ ಗುಂಡಿನ ದಾಳಿಯನ್ನು ನಡೆಸಿ ಇಬ್ಬರನ್ನು ಘಾಸಿಗೊಳಿಸಿದ ಎರಡು ದಿನಗಳ ತರುವಾಯ ಈ ಘಟನೆ ನಡೆದಿದೆ. ಗಾಯಗೊಂಡ ಇಬ್ಬರು ಪಿಡಿಪಿ ಕಾರ್ಯಕರ್ತರಾಗಿದ್ದು, ಅವರನ್ನು ಮೊದಲು ಅಪಹರಣಗೊಳಿಸಿ ಬಳಿಕ ಅವರ ಮೇಲೆ ಗುಂಡು ಹಾರಿಸಲಾಗಿತ್ತು.
ಉಗ್ರ ವಿರೋಧಿ ಕಾರ್ಯಾಚರಣೆ ಕಣಿವೆ ರಾಜ್ಯದಲ್ಲಿ ಅತ್ಯಂತ ಚುರುಕುಗೊಂಡಿದ್ದು, ಮೇ 5 ರಂದು ಮೂರು ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಇವರಿಂದಲೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಕಳೆದ ಫೆ. 14 ರಂದು ಪುಲ್ವಾಮ ದಾಳೀ ನಡೆದ ಬಳಿಕ ಜಮ್ಮು ಕಾಶ್ಮೀರದಲ್ಲಿ ಒಟ್ಟು 41 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲಾಂನ್ ಹೇಳಿದ್ದಾರೆ. ಮೃತಪಟ್ಟ ಉಗ್ರರ ಪೈಕಿ 25 ಉಗ್ರರು ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರು ಮತ್ತು 13 ಮಂದಿ ಪಾಕಿಸ್ಥಾನದವರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.