ಶಿರಸಿ : ನಗರದ ಎಂ.ಇ.ಎಸ್ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ವಿವೇಕಾನಂದ ಜಯಂತಿಯ ಆಚರಣೆ ನಡೆಯಿತು ಹಾಗು ‘ಸಮರ್ಥ ಭಾರತ ಸಂಸ್ಥೆಯಿಂದ ಜಿಲ್ಲೆಯಾದ್ಯಂತ ಎರಡು ವಾರಗಳ ಕಾಲ ನಡೆಯಲಿರುವ ವಿವೇಕ್ ಬ್ಯಾಂಡ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು, ವಿವೇಕ ಕಂಕಣ (ವಿವೇಕ್ ಬ್ಯಾಂಡ್) ಬಿಡುಗಡೆ ಗೊಳಿಸಿ, ಧರಿಸುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ರವಿ ನಾಯ್ಕ್ ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮರ್ಥ ಭಾರತದ ವಿಭಾಗ ಸಂಚಾಲಕ ಗುರುಪ್ರಸಾದ ಹೆಗಡೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅರಿಯುವುದರ ಜೊತೆಗೆ ಸಾಮಾಜಿಕ ಉಪಯುಕ್ತ ಕಾರ್ಯಗಳನ್ನು ಮಾಡುವುದಾಗಿ ಯುವಜನತೆ ಸಂಕಲ್ಪ ಮಾಡುವಂತೆ ಕರೆ ನೀಡಿದರು.
ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಶ್ರೀಧರ ಹಿರೇಹದ್ದ ಮಾತನಾಡಿ ವಿವೇಕಾನಂದರು ಬಾಲ್ಯದಲ್ಲಿ ಅತ್ಯಂತ ತುಂಟರಾಗಿದ್ದರಲ್ಲದೆ ಹಾಗೂ ಎಲ್ಲವನ್ನು ಪರೀಕ್ಷಿಸಿ ಒಪ್ಪುವ ಸ್ವಭಾವದವರಾಗಿದ್ದರು. ಸ್ವತಃ ತನ್ನ ಗುರುವಾದ ರಾಮಕೃಷ್ಣ ಪರಮಹಂಸರನ್ನೂ ಕೂಡ ಪರೀಕ್ಷೆ ಮಾಡಿ ಸ್ವೀಕರಿಸಿದ್ದರು ಎಂದರು.
ಗುರು – ಶಿಷ್ಯರೆಂದರೆ ರಾಮಕೃಷ್ಣ ಪರಮಹಂಸ – ವಿವೇಕಾನಂದ ಎಂಬ ಅಭಿಪ್ರಾಯ ಮೂಡುವ ಮಟ್ಟಿಗೆ ಅವರಲ್ಲಿ ಶ್ರೇಷ್ಠ ಸಂಬಂಧವಿತ್ತು, ಒಬ್ಬ ಒಳ್ಳೆಯ ಗುರುವು ತನ್ನಿಂದ ಆಗಬೇಕಾದ ಕೆಲಸವನ್ನು ತಕ್ಕ ಶಿಷ್ಯನಿಂದ ಮಾಡಿಸುತ್ತಾನೆ; ಅದೇ ರೀತಿ ರಾಮಕೃಷ್ಣರು ಸಮಾಜದಲ್ಲಿ ಆಗಲೇಬೇಕಿದ್ದ ಕಾರ್ಯಕ್ಕೆ ವಿವೇಕಾನಂದರನ್ನು ಆಯ್ಕೆ ಮಾಡಿಕೊಂಡರು ಎಂದರು.
ಭಾರತ ಹಾಗೂ ವಿಶ್ವ ಪರ್ಯಟನೆಯ ಅನುಭವದಿಂದ ವಿವೇಕಾನಂದರು ಒಬ್ಬ ವೀರ ಸನ್ಯಾಸಿಯೆನಿಸಿದರು, ಭಾರತದ ಉದ್ದಾರದಿಂದ ವಿಶ್ವದ ಅಭ್ಯುದಯವೆಂಬುದನ್ನು ಪ್ರತಿಪಾದಿಸಿದರು. ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಶ್ರೇಷ್ಠ ಸಂಸ್ಕೃತಿಯ ಕುರಿತಾಗಿ ವಿವೇಕಾನಂದರು ಮಾಡಿದ ಭಾಷಣದಿಂದ ಭಾರತದ ಬಗ್ಗೆ ಇದ್ದ ತಪ್ಪು ಕಲ್ಪನೆ ದೂರವಾಗಿ ಗೌರವ ಭಾವ ಮೂಡಿತು ಎಂದರು.
ಸಮರ್ಥ ಭಾರತವು ಈ ವರ್ಷ ಕೈಗೆತ್ತಿಕೊಂಡಿರುವ ಮೂರು ಸೇವಾ ಆಯಾಮಗಳ ಬಗ್ಗೆ ಮಾತನಾಡುತ್ತ, ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮಗಳಿಂದ ಪರಿಸರವನ್ನು ರಕ್ಷಿಸಲು ಪ್ರತಿಯೊಬ್ಬರೂ ಗಿಡವೊಂದನ್ನು ನೆಟ್ಟು ಪೋಷಿಸಿರಿ, ದೇಶದ ಆಡಳಿತ ವ್ಯವಸ್ಥೆ ಉತ್ತಮವಾಗಿರಲು ಖಡ್ಡಾಯವಾಗಿ ಮತದಾನದ ಹಕ್ಕನ್ನು ಚಲಾಯಿಸಿ ಮತ್ತು ಉತ್ತಮ ಅರೋಗ್ಯ ಹೊಂದುವುದರ ಜೊತೆಗೆ ತುರ್ತು ಅಗತ್ಯವಿರುವಾಗ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಕರೆ ನೀಡಿದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕು. ನವೀನ ಮತ್ತು ಕು. ಅಲೋಕ ಉಪಸ್ಥಿತರಿದ್ದರು, ಕುಮಾರಿ ನವ್ಯಾ ಭಟ್ಟ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.