ನವದೆಹಲಿ: ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ದುಷ್ಟಶಕ್ತಿಗಳು ಹೆಚ್ಚಾಗುತ್ತಿವೆ, ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಹೇರಿಕೆಯಾಗುವ ಸಂಭವವನ್ನು ತಳ್ಳಿ ಹಾಕುವಂತಿಲ್ಲ ಎಂದು ಬಿಜೆಪಿ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿ ಅವರು ನೀಡಿರುವ ಹೇಳಿಕೆ ನರೇಂದ್ರ ಮೋದಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ದೂಡಿದೆ. ಸರ್ಕಾರವನ್ನು ದೂಷಿಸಲು ಇದರಿಂದ ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
ಈಗಾಗಲೇ ಲಲಿತ್ ಮೋದಿ ವಿವಾದದಿಂದ ಮುಜುಗರಕ್ಕೊಳಗಾಗಿರುವ ಬಿಜೆಪಿಗೆ, ಅಡ್ವಾಣಿ ಹೇಳಿಕೆಯಿಂದ ಮತ್ತಷ್ಟು ಭ್ರಮನಿರಸನವಾಗಿದೆ. ಕಾಂಗ್ರೆಸ್, ಆಮ್ ಆದ್ಮಿ, ಜೆಡಿಯು, ಆರ್ಜೆಡಿ, ಸಿಪಿಐ-ಎಂ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳೂ ಅಡ್ವಾಣಿ ಹೇಳಿಕೆಯನ್ನು ಹಿಡಿದುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ದೇಶದಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿ ೪೦ ವರ್ಷಗಳು ಸಂದ ಹಿನ್ನಲೆಯಲ್ಲಿ ಗುರುವಾರ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಅಡ್ವಾಣಿ, ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಬಲ್ಲ ಶಕ್ತಿಗಳು ದೇಶದಲ್ಲಿ ಬಲಿಷ್ಠವಾಗುತ್ತಿವೆ, ಮತ್ತೊಮ್ಮೆ ತುರ್ತು ಪರಿಸ್ಥಿತಿ ಹೇರಿಕೆಯಾಗುವ ಸಂಭವ ತಳ್ಳಿಹಾಕುವಂತಿಲ್ಲ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ’ಹೌದು ಅಡ್ವಾಣಿ ಮಾತುಗಳು ನಿಜ, ಮತ್ತೊಮ್ಮೆ ತುರ್ತು ಪರಿಸ್ಥಿತಿ ಹೇರಿಕೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ದೆಹಲಿಯೇ ಅವರ ಮೊದಲ ಪ್ರಯೋಗ ಶಾಲೆಯಾಗಬಹುದೇ?’ ಎಂದಿದ್ದಾರೆ.
ಅಡ್ವಾಣಿ ಮಾತುಗಳು ಅಕ್ಷರಶಃ ನಿಜ ಎಂದು ಜೆಡಿಯು ಮುಖಂಡ ನಿತೀಶ್ ಕುಮಾರ್ ಹೇಳಿದರೆ, ಈಗಾಗಲೇ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಮತ್ತು ಹಿಟ್ಲರ್ ಮನಸ್ಥಿತಿ ಇದೆ ಎಂದು ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಅಡ್ವಾಣಿ ನೀಡಿರುವ ಹೇಳಿಕೆ ಮೋದಿ ಸರ್ಕಾರಕ್ಕೆ ಮುಜುಗರ ತಂದರೆ, ವಿರೋಧ ಪಕ್ಷಗಳಿಗೆ ಟೀಕೆಸಲು ಪ್ರಬಲ ಅಸ್ತ್ರವನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.