ಮುಂಬಯಿ: ಋತುಸ್ರಾವದ ವೇಳೆ ಮಹಿಳೆಯರ ನೈರ್ಮಲ್ಯ ಕಾಪಾಡುವ ಸ್ಯಾನಿಟರಿ ಪ್ಯಾಡ್ಗಳು ನಮ್ಮ ದೇಶದ ಮೂಲೆ ಮೂಲೆ ಮಹಿಳೆಯರನ್ನು ಇನ್ನೂ ತಲುಪಿಲ್ಲ ಎನ್ನುವುದು ದುರಾದೃಷ್ಟ. ಹಣಕಾಸಿನ ತೊಂದರೆ, ಅರಿವಿನ ಕೊರತೆಯಿಂದ ಹಳ್ಳಿ, ಗುಡ್ಡಗಾಡು ಪ್ರದೇಶಗಳ ಬಡಪಾಯಿ ಮಹಿಳೆಯರು ಇನ್ನೂ ಪ್ಯಾಡ್ಗಳಿಗೆ ತಮ್ಮನ್ನು ತಾವು ಒಗ್ಗಿಸಿಕೊಂಡಿಲ್ಲ. ಈ ಸಮಸ್ಯೆಯನ್ನು ಎತ್ತಿ ತೋರಿಸುವ ಸಲುವಾಗಿಯೇ ನಟ ಅಕ್ಷಯ್ ಕುಮಾರ್ ನಟನೆಯಲ್ಲಿ ‘ಪ್ಯಾಡ್ ಮ್ಯಾನ್’ ಎಂಬ ನೈಜ ಕಥೆಯನ್ನಾಧರಿತ ಚಿತ್ರವೊಂದು ಬಂದಿತ್ತು. ಅತ್ಯುತ್ತಮ ವಿಮರ್ಶೆಯೂ ಈ ಚಿತ್ರಕ್ಕೆ ಸಿಕ್ಕಿತ್ತು. ಅಷ್ಟೇ ಅಲ್ಲ ಕೊಂಚ ಮಟ್ಟಿನ ಅರಿವು ಮೂಡಿಸುವಲ್ಲಿಯೂ ಈ ಚಿತ್ರ ಯಶಸ್ವಿಯಾಯಿತು.
ಈ ‘ಪ್ಯಾಡ್ ಮ್ಯಾನ್’ ಚಿತ್ರವನ್ನು ವೀಕ್ಷಿಸಿ ಸ್ಫೂರ್ತಿ ಪಡೆದುಕೊಂಡ ಪೋಷಕರೊಂದಿಗೆ ದುಬೈನಲ್ಲಿ ನೆಲೆಸಿರುವ ಮಹಾರಾಷ್ಟ್ರ ಮೂಲದ 13 ವರ್ಷದ ಬಾಲಕಿಯೊಬ್ಬಳು, ಎಲ್ಲರು ಮೆಚ್ಚುವಂತಹ ಕಾರ್ಯವನ್ನು ಮಾಡಿದ್ದಾಳೆ. ಮಹಾರಾಷ್ಟ್ರದ ಬುಡಕಟ್ಟು ಜನಾಂಗದ 250 ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡಿರುವ ಈಕೆ, ಅವರಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ದಾನ ಮಾಡುತ್ತಿದ್ದಾಳೆ.
ರಿವಾ ತುಲ್ಪುಲೆ ಈ ಕಾರ್ಯವನ್ನು ಮಾಡುತ್ತಿರುವ ಬಾಲಕಿ, ಉಚಿತವಾಗಿ ಸ್ಯಾನಿಟರಿ ಪ್ಯಾಡ್ಗಳನ್ನು ಹೆಣ್ಣು ಮಕ್ಕಳಿಗೆ ಪೂರೈಕೆ ಮಾಡುವ ಸಲುವಾಗಿಯೇ ಈಕೆ ದುಬೈನಲ್ಲಿ ಅನುದಾನ ಸಂಗ್ರಹಿಸುವ ಅಭಿಯಾನವನ್ನು ಕಳೆದ ಎರಡು ತಿಂಗಳಿನಿಂದ ಮಾಡುತ್ತಿದ್ದಾಳೆ. ಸಂಗ್ರಹಿಸಿದ ಅನುದಾನದಿಂದ 250 ಮಹಿಳೆಯರಿಗೆ ವರ್ಷಕ್ಕಾಗುವಷ್ಟು ಪ್ಯಾಡ್ ಖರೀದಿ ಮಾಡಿದ್ದಾಳೆ. ಕಳೆದ ಶನಿವಾರ ದುಬೈನಿಂದ ಮಹಾರಾಷ್ಟ್ರದ ಸಹಪುರ ತಾಲೂಕಿಗೆ ಆಗಮಿಸಿ, ಅಲ್ಲಿನ ಶಾಲಾ ಬಾಲಕಿಯರಿಗೆ ಒಂದು ವರ್ಷಕ್ಕೆ ಆಗುವಷ್ಟು ಸ್ಯಾನಿಟರಿ ಪ್ಯಾಡ್ಗಳ ಸ್ಟಾಕ್ನ್ನು ಹಸ್ತಾಂತರ ಮಾಡಿದ್ದಾಳೆ.
ನನ್ನ ಈ ಕಾರ್ಯಕ್ಕೆ ಪ್ಯಾಡ್ಮ್ಯಾನ್ ಚಿತ್ರವೇ ಕಾರಣ ಎನ್ನುವ ರಿವಾ, ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಪ್ರತಿಪಾದಿಸಿದ್ದಾಳೆ.
source: www.indiatimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.