ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ 2016 ಆಗಸ್ಟ್ 5 ರಿಂದ ಪ್ರಾರಂಭವಾಗಲಿದ್ದು, ಜಾಗತಿಕ ಕ್ರೀಡೋತ್ಸವಕ್ಕೆ ಇಂದು ಅಧಿಕೃತ ಚಾಲನೆ ದೊರೆಯಲಿದೆ.
ರಿಯೋ ಡಿ ಜನೈರೋದಲ್ಲಿನ ಮರಕಾನ ಸ್ಟೇಡಿಯಂ ಉದ್ಘಾಟನಾ ಸಮಾರಂಭಕ್ಕಾಗಿ ಸಜ್ಜಾಗಿದೆ. ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 4.20ಕ್ಕೆ) ಪ್ರಾರಂಭವಾಗಲಿದೆ. ಸುಮಾರು 3 ಗಂಟೆಗೂ ಹೆಚ್ಚು ಕಾಲ ಸಮಾರಂಭ ನಡೆಯಲಿದ್ದು ಸುಮಾರು 6 ಸಾವಿರ ಕಲಾವಿದರು ಈ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ರೂಪುರೇಷೆಯು ನಿರ್ದೇಶಕ ಫೆರ್ನಾಂಡೊ ಮೈರೆಲ್ಲೆಸ್, ನಿರ್ದೇಶಕ ಅಂಡ್ರುಚಾ ವಾಡ್ಡಿಂಗ್ಟನ್ ಮತ್ತು ಡೆನೀಲಾ ಥಾಮಸ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ.
ಫುಟ್ಬಾಲ್ ಮಾಂತ್ರಿಕ 74 ವರ್ಷದ ಪೀಲೆ ಅವರು ಒಲಿಂಪಿಕ್ಸ್ ಕ್ರೀಡಾಜ್ಯೋತಿಯನ್ನು ಮರಕಾನಾ ಸ್ಟೇಡಿಯಂನಲ್ಲಿ ಬೆಳಗಲಿದ್ದಾರೆ. ನಂತರ ಈ ಕ್ರೀಡಾಜ್ಯೋತಿಯನ್ನು ರಿಯೋ ಡಿ ಜನೈರೋ ಸಮುದ್ರತೀರಕ್ಕೆ ವರ್ಗಾವಣೆ ಮಾಡಲಾಗುತ್ತದೆ.
ಸಮಾರಂಭದ ಕುರಿತು ಈಗಾಗಲೇ ಹಲವು ವರದಿಗಳು ಹರಡಿದ್ದು, ಬ್ರೆಜಿಲ್ ಕಾರ್ನಿವಲ್ ನೆನಪಿಸುವ ಸಾಂಬಾ ನೃತ್ಯ, ಸಂಗೀತ ಪ್ರಮುಖ ಹೈಲೈಟ್ಸ್ಗಳಾಗಿದ್ದು, ವರ್ಣರಂಜಿತ ಕಾರ್ಯಕ್ರಮಗಳು ಮೂಡಿಬರಲಿವೆ ಎನ್ನಲಾಗಿದೆ.
ಖ್ಯಾತ ಸಂಗೀತಗಾರರಾದ ಗಿಲ್ಬರ್ಟೊ ಗಿಲ್ ಮತ್ತು ಸಿಯಾಟಾನೊ ವೆಲೊಸೊ, ವಿಶ್ವದ ಪ್ರಸಿದ್ಧ ಸೂಪರ್ ಮಾಡೆಲ್ ಜಿಸೆಲ್ ಬುಂಡ್ಚೆನ್, ಬ್ರೆಜಿಲಿಯನ್ ಮಾಡೆಲ್ ಲೀ ಟಿ ಇವರೆಲ್ಲರೂ ಇರಲಿದ್ದಾರೆ. ಫ್ರಾನ್ಸ್, ಇಟಲಿ, ಪೆರುಗ್ವೆ, ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಎನ್.ರಾಮಚಂದ್ರನ್, ತಂಡದ ಚೆಫ್ ಡಿ ಮಿಷನ್ ರಾಕೇಶ್ ಗುಪ್ತಾ ಜೆಕ್ ಗಣರಾಜ್ಯ, ನೆದರ್ಲೆಂಡ್, ಅರ್ಜೆಂಟೀನಾ, ಕೊಲಂಬಿಯಾ, ಪೋರ್ಚುಗಲ್ ದೇಶಗಳ ರಾಷ್ಟ್ರಾಧ್ಯಕ್ಷರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗ್ರೀಸ್ ತಂಡ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಥ ಸಂಚಲನ ನಡೆಸುತ್ತಿದ್ದು, ಮೊದಲ ಒಲಿಂಪಿಕ್ಸ್ನ ಆತಿಥ್ಯ ವಹಿಸಿದ್ದ ಗ್ರೀಸ್ಗೆ ಈ ಗೌರವ ನೀಡಲಾಗುತ್ತಿದೆ. ಇನ್ನುಳಿದಂತೆ ಬ್ರೆಜಿಲ್ ವರ್ಣಮಾಲೆಯ ಪ್ರಕಾರ ವಿವಿಧ ದೇಶಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ. ಆಯಾ ದೇಶಗಳ ಸ್ಟಾರ್ ಅಥ್ಲೀಟ್ಗಳು ದೇಶದ ಧ್ವಜವನ್ನು ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ. ಆತಿಥೇಯ ತಂಡ ಬ್ರೆಜಿಲ್ ಕೊನೆಯಲ್ಲಿ ಬರಲಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಕ್ರೀಡಾಪ್ರಿಯರಿಗೆ ಒಲಿಂಪಿಕ್ಸ್ ಕ್ರೀಡೋತ್ಸವವನ್ನು ನೋಡುವುದೇ ಒಂದು ಹಬ್ಬ. ಅದಕ್ಕೆ ಇಂದು ಅಧಿಕೃತ ಚಾಲನೆ ದೊರೆತು, ಇಂದಿನಿಂದ ಪ್ರಾರಂಭವಾಗಿ ಆಗಸ್ಟ್ 21 ಕ್ಕೆ ಮುಕ್ತಾಯವಾಗಲಿದೆ. ಆಯಾ ದೇಶಗಳ ಅಭಿಮಾನಿಗಳು ತಮ್ಮ ದೇಶದ ಕ್ರೀಡಾಪಟುಗಳು ಎಷ್ಟು ಪದಕವನ್ನು ವಿಜೇತರಾಗಿ ಮರಳುತ್ತಾರೆ ಎಂದು ಪ್ರಾರ್ಥಿಸುತ್ತಾ ಶುಭಕೋರಿ, ಕ್ರೀಡೋತ್ಸವವನ್ನು ಆನಂದಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.