ಮುಂಬಯಿ: ಬರದಿಂದ ತೀವ್ರ ತತ್ತರಿಸಿ ಹೋಗಿರುವ ಮಹಾರಾಷ್ಟ್ರದ ಲಾಥೂರ್ಗೆ ಮಂಗಳವಾರ ಬೆಳಿಗ್ಗೆ ರೈಲು ಟ್ಯಾಂಕರ್ ಮೂಲಕ 5 ಲಕ್ಷ ಲೀಟರ್ ನೀರನ್ನು ಪೂರೈಕೆ ಮಾಡಲಾಗಿದೆ.
ಲಾಥೂರ್ನ ಮರಾಠವಾಡ ಪ್ರದೇಶ ನೀರಿನ ತೀವ್ರ ಅಭಾವವನ್ನು ಹೊಂದಿದ್ದು, ಇಲ್ಲಿನ ಜನರಿಗೆ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಹಲವು ಕಡೆಗಳಿಂದ ಲಾಥೂರ್ ಜಿಲ್ಲೆಯ ವಿವಿಧ ಕಡೆಗಳಿಗೆ ರೈಲು ಟ್ಯಾಂಕರ್ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗಿದೆ, ಮಂಗಳವಾರ ಬೆಳಿಗ್ಗೆ 5 ಲಕ್ಷ ಲೀಟರ್ ನೀರು ಬಂದಿದೆ.
ಸ್ಥಳಿಯರು ತಮ್ಮ ಬಾಯಾರಿಕೆಯನ್ನು ತಣಿಸಲು ಬಂದ ಈ ರೈಲು ಟ್ಯಾಂಕರ್ಗಳ ಪೈಲೆಟ್ಗಳಿಗೆ ಸನ್ಮಾನವನ್ನೂ ಮಾಡುತ್ತಿದ್ದಾರೆ.
ಲಾಥೂರ್ನಲ್ಲಿ ದಿನಕ್ಕೆ 20 ಮಿಲಿಯನ್ ಲೀಟರ್ನ ಅಗತ್ಯವಿದೆ, ಇಷ್ಟು ಪ್ರಮಾಣದ ನೀರನ್ನು ಪೂರೈಸುವುದು ಅಲ್ಲಿನ ಆಡಳಿತ ಮತ್ತು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
ಇನ್ನೊಂದೆಡೆ ಲಾಥೂರ್ ಸಹಾಯಕ್ಕೆ ಧಾವಿಸಿರುವ ದೆಹಲಿ ಸರ್ಕಾರ ರೈಲು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದಾಗಿ ಘೋಷಿಸಿದೆ.
ನೀರಾವರಿ ಸಚಿವರೊಂದಿಗೆ ಮಾತುಕತೆ ನಡೆಸಿದ ಸಿಎಂ ಅರವಿಂದ್ ಕೇಜ್ರಿವಾಲ್ ರೈಲು ಟ್ಯಾಂಕರ್ಗಳ ಮೂಲಕ ಅಲ್ಲಿಗೆ ನೀರು ಪೂರೈಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕೇಜ್ರವಾಲ್, ತೀವ್ರ ನೀರಿನ ಅಭಾವ ಹೊಂದಿರುವ ಲಾಥೂರ್ಗೆ ಸಹಾಯ ಮಾಡುವ ನಿಟ್ಟಿನಲ್ಲಿ ಎಲ್ಲಾ ದೆಹಲಿಗರು ನೀರನ್ನು ಉಳಿಸಬೇಕು ಎಂದು ಕರೆ ನೀಡಿದ್ದಾರೆ.