News13

ಮಂಗಳೂರು ರಥೋತ್ಸವ

ಎರಡು ಶತಮಾನಗಳಷ್ಟು ಪ್ರಾಚೀನವಾದ ಇತಿಹಾಸ ಹೊಂದಿರುವ ಮಂಗಳೂರಿನ ರಥಬೀದಿ ವೆಂಕಟರಮಣ ದೇವಸ್ಥಾನದ ರಥೋತ್ಸವ ಅಂದರೆ ಒಂದು ಸಂಭ್ರಮ. ಇಲ್ಲಿ ಊರು ಪರ ಊರಿನಿಂದ ಜನ ಬಂದು ಸೇರುತ್ತಾರೆ. ಮೊದಲೇ ಆರಾಧನಾ ಕೇಂದ್ರ ಆಗಿರುವ ಇಲ್ಲಿ ಕ್ರಿ.ಶ. 1804 ರಲ್ಲಿ ಕಾಶೀ ಮಠಾದೀಶ ಶ್ರೀ ವಿಭುಧೇಂದ್ರ ತೀರ್ಥರು ಭವ್ಯವಾಗಿರುವ ಶ್ರೀ ವೀರ ವೆಂಕಟರಮಣನನ್ನು ಪ್ರತಿಷ್ಟಾಪನೆ ಮಾಡಿದರು. ಆಗಿನಿಂದ ಈ ದೇವಸ್ಥಾನವು ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನ ಎಂದು ಹೆಸರುವಾಸಿ ಆಗಿದೆ. ಮತ್ತು ಅಸರಾಧನೆ, ಉತ್ಸವಾದಿಗಳು ಪ್ರಾರಂಭವಾದವು.

ರಥವು ಸಂಚರಿಸುವ ರಸ್ತೆ ಆದ್ದರಿಂದ ಈ ರಸ್ತೆಗೆ ರಥಬೀದಿ ಅನ್ನುತ್ತಾರೆ. ಶ್ರೀ ಕಾಳಿಕಾಂಬ ದೇವಸ್ಥಾನದ ವರೆಗೆ ರಥಬೀದಿ ಅಂತಲೂ ಅಲ್ಲಿಂದ ಮುಂದಿನ ರಸ್ತೆಗೆ ಕೆಳಗಿನ ರಥಬೀದಿ ಅಂತಲೂ ಕರೆಯುತ್ತಾರೆ.

ಈ ಮಂಗಳೂರು ರಥೋತ್ಸವ ಅಂತಲೋ ಅಥವಾ ಕೊಂಕಣಿ ಸಂಭಾಷಣೆ ಯಂತೆ ಕೊಡಿಯಾಲ ತೇರು ಅಂತಲೋ ಕರೆಯುವ ಈ ರಥೋತ್ಸವವು ಪ್ರಾರಂಭ ವಾಗುವುದು ಮಾಘ ಶುದ್ದ ತದಿಗೆಯಲ್ಲಿ ಧ್ವಜಾರೋಹಣ ಮಾಡುವ ಮೂಲಕ. ಈ ದಿವಸದಿಂದ ಪಂಚಮಿವರೆಗೆ ದೇವಸ್ಥಾನದೊಳಗೆ ಯಜ್ಞಯಾಗಾದಿ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವಗಳು ಮುಂತಾದವು ನಡೆಯುತ್ತವೆ. ಷಷ್ಠಿ ಅಂದರೆ ನಾಲ್ಕನೇಯ ದಿನ ‘ಮೃಗಬೇಟೆ’ ಉತ್ಸವ ಮತ್ತು ಸಣ್ಣ ರಥದಲ್ಲಿ ದೇವರ ಮೂರ್ತಿಯನ್ನು ಇಟ್ಟು ರಥಬೀದಿಯುದ್ದಕ್ಕೂ ಈ ಸಣ್ಣ ರಥವನ್ನು ಎಳೆದುಕೊಂಡು ಹೋಗುವುದು ಹಾಗೇನೆ ದೇವಸ್ಥಾನದ ಒಳಗೂ ಉತ್ಸವಗಳು ನಡೆಯುತ್ತವೆ. ಮೃಗಬೇಟೆ ಅಂದರೆ ಈ ಹಿಂದಿನಿಂದಲೂ ನಡೆದುಬಂದಿರುವ ಆಚರಣೆಯಂತೆ ದೇವರು ಬೆಳ್ಳಿ ಪಲ್ಲಕ್ಕಿಯಲ್ಲಿ ಸವಾರಿಯಾಗಿ ವಿಠೋಬ ದೇವಸ್ಥಾನದ ಮುಂದಿರುವ ಕೆರೆಯ ಹತ್ತಿರದ ವನದೊಳಗೆ ಅಡಗಿ ಕೂತಿರುವ ಮೃಗಕ್ಕೆ ಬಾಣವನ್ನು ಹೊಡೆಯುವ ಸಂಪ್ರದಾಯದ ನಂತರ ಪುನಃ ದೇವಸ್ಥಾನದೆಡೆಗೆ ಮರಳುವುದು.

ಆದರೆ ಈಗ ಈ ಕಾರ್ಯಕ್ರಮವು ಡೊಂಗರಕೇರಿ ಕಟ್ಟೆಯ ಹತ್ತಿರ ನಡೆಯುತ್ತದೆ. ದೇವರು ಸಂಚರಿಸುವ ದಾರಿಯುದ್ದಕ್ಕೂ ಸಮಾಜದ ಜನರು ಅವರ ಮನೆ ಮುಂದೆ ಆರತಿ ಎತ್ತಿ ಧನ್ಯತೆಯನ್ನು ಹೊಂದುತ್ತಾರೆ. ಸಪ್ತಮಿ ದಿವಸ ಪಟ್ಟದ ದೇವರು ಶ್ರೀ ವೀರ ವೆಂಕಟರಮಣನನ್ನು ಚಿನ್ನದ ಪಲ್ಲಕ್ಕಿಯಲ್ಲಿಟ್ಟು ದೇವಸ್ಥಾನದಲ್ಲಿ ಪ್ರಾಂಗಣದ ಮುಖೇನ ಹೊರಗಡೆಗೆ ಬಂದು ಸಂಜೆವೇಳೆಯಲ್ಲಿ ಸಹಸ್ರಾರು ಭಕ್ತಜನ ಸೇರಿರುವ ರಥಬೀದಿಯಲ್ಲಿ ಸುಂದರವಾದ ಹಾಗೂ ಸುಶೋಭಿತವಾಗಿರುವ ಬ್ರಹ್ಮರಥದಲ್ಲಿ ದೇವರನ್ನು ಕೂರಿಸುವ “ರಥಾರೋಹಣ” ಎಂಬ ವೈಭವ ನೋಡೋದಕ್ಕೆ ಎರಡು ಕಣ್ಣು ಸಾಲದು. ರಥಾರೋಹಣದ ಬಳಿಕ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಆರಂಭವಾಗುತ್ತದೆ. ಸುಮಾರು 30-35 ಸಾವಿರ ಜನ ಈ ಸಂತರ್ಪಣೆಯಲ್ಲಿ ಪ್ರಸಾದವನ್ನು ಸ್ವೀಕರಿಸುತ್ತಾರೆ‌. ರಾತ್ರಿ ನಡೆಯುವ ರಥೋತ್ಸವದಲ್ಲಿ “ನಾವು ದೇವರ ರಥವನ್ನು ಎಳೆದರೆ, ದೇವರು ನಮ್ಮ ಜೀವನ ಎಂಬ ರಥದ ಪಥವನ್ನು ಸುಗಮ ಗೊಳಿಸುತ್ತಾನೆ” ಎಂಬುದು ಜನರ ನಂಬಿಕೆ.

ಹಾಗೆ ಕೊನೆಗೆ ಭೀಷ್ಮಾಷ್ಟಮಿ ದಿವಸ ಅವಭೃತ (ಓಕಳಿ-ಹೋಳಿ) ಉತ್ಸವ ನಡೆಯುವುದರ ಮೂಲಕ ರಥೋತ್ಸವ ಸಂಪನ್ನಗೊಳ್ಳುತ್ತದೆ. ಆಬಾಲ-ವೃಧ್ದರೆಲ್ಲರೂ ಬಣ್ಣ ಹಾಗೂ ಬಣ್ಣದ ನೀರನ್ನು ಒಬ್ಬರಿಗೊಬ್ಬರು ಎರಚುವ ಆಟವಾಡುವ ಮೂಲಕ ಇಡೀ ರಥಬೀದಿಯೂ ವರ್ಣರಂಜಿತ ವಾಗುತ್ತದೆ‌. ಶ್ರೀ ದೇವರನ್ನು ಕೆರೆಯಲ್ಲಿ ಅಭಿಷೇಕ ಮಾಡಿಸಿ ದೇವಸ್ಥಾನಕ್ಕೆ ಬರುವುದರೊಂದಿಗೆ ಉತ್ಸವದ ಪರಿಸಮಾಪ್ತಿಯಾಗುತ್ತದೆ. ಊರ ಪರ ಊರಿನಿಂದ ಬಂದ ಜನರು ಮುಂದಿನ ವರುಷದ ರಥೋತ್ಸವಕ್ಕೆ ಪುನಃ ಮರಳಿ ಬರುವ ಆಸೆಯೊಂದಿಗೆ ತೆರಳುತ್ತಾರೆ. ರಥೋತ್ಸವದ ಈ ಐದು ದಿವಸ ಶ್ರೀನಿವಾಸ ಕಲ್ಯಾಣ ಮಂಟಪದಲ್ಲೂ ಬೆಳಿಗ್ಗೆ ಗಂಜಿ ಊಟ ಹಾಗೂ ಸಂಜೆವೇಳೆ ದೇವರ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಇರುತ್ತದೆ.

ಇವೆಲ್ಲಾ ಸಂಭ್ರಮಗಳು ಮನಸ್ಸಿಗೆ ಮುದ ನೀಡುವುದಲ್ಲದೆ, ಓಕಳಿಯಾಟದಲ್ಲಿ ನಾವೆಲ್ಲರೂ ಸಮಾನರೆಂಬ ಭಾವವು ಮೂಡುತ್ತದೆ. ನಮ್ಮ ಅತ್ಯಮೂಲ್ಯ ಸಂಸ್ಕೃತಿಯ ಅನಾವರಣವನ್ನು ಇಲ್ಲಿ ಕಾಣಬಹುದು. ನಮ್ಮ ಹೆಣ್ಣುಮಕ್ಕಳು ಈ ದಿನ ತೊಡುವ ಉಡಿಗೆ-ತೊಡಿಗೆಗಳಿರಬಹುದು, ಗಂಡಸರು ಮಡಿ ಬಟ್ಟೆಯನ್ನು ತೊಟ್ಟು ಸ್ವಯಂಸೇವಕರಾಗಿ ಇಡಿ ಉತ್ಸವವನ್ನು ಸುಧಾರಿಸಿ ಕೊಡುವ ಆ ಧಾವಂತ ನೋಡುವುದೇ ಚೆನ್ನ.
ನಮ್ಮ ಶ್ರೇಷ್ಠ ಸಂಸ್ಕೃತಿಯ ಉಳಿವು ಹಾಗೂ ಕುಟುಂಬ ಸದಸ್ಯರ ಪರಿಚಯದಿಂದ ಉದಯಿಸುವ ಹೊಸ ವೈವಾಹಿಕ ಸಂಭಂದಗಳು ಇವೆಲ್ಲವೂ ಈ ರಥೋತ್ಸವ ದ ಇನ್ನೊಂದು ಸಾರ್ಥಕತೆಗಳು.

ಬನ್ನಿ ಮಂಗಳೂರಿಗೆ, ಈ ವರುಷದ ರಥೋತ್ಸವವನ್ನು ಕಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬಹುದು. ಇದು ನಮ್ಮ ಮನಸ್ಸನ್ನು ಯುಗಾಂತರದ ವೈಭವಕ್ಕೆ ಕರೆದೊಯ್ಯುತ್ತೆ ಅನ್ನುವುದಕ್ಕೆ ಸಂಶಯವಿಲ್ಲ.

ಲೇಖನ : ಶ್ರೀ ಅರುಣ್ ಜಿ. ಶೇಟ್, ಮಂಗಳೂರು

 

Back To Top