ನವದೆಹಲಿ: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ಉಭಯ ದೇಶಗಳು ವ್ಯಾಪಾರ ಸಂಬಂಧ ವೃದ್ಧಿ ಮತ್ತು ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದ ಆರು ಒಪ್ಪಂದಗಳಿಗೆ ಸಹಿ ಹಾಕಿವೆ.
ಇಂಧನ ಸಹಕಾರದ ಬಗೆಗಿನ ಒಪ್ಪಂದಕ್ಕೂ ಉಭಯ ದೇಶಗಳು ಸಹಿ ಹಾಕಿವೆ.
ಟ್ರುಡೋ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನಿಮ್ಮ ಭೇಟಿ ಸುಧೀರ್ಘ ಸಮಯದಿಂದ ನಿರೀಕ್ಷಿಸಲ್ಪಟ್ಟದ್ದು, ನಿಮ್ಮ ಕುಟುಂಬದೊಂದಿಗೆ ಆಗಮಿಸಿದ್ದೀರಿ ಎಂಬುದು ನಮಗೆ ಸಂತೋಷ ತಂದಿದೆ’ ಎಂದರು.
‘ಭಯೋತ್ಪಾದನೆ ಎಂಬುದು ನಮ್ಮಂತಹ ದೇಶಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಈ ಶಕ್ತಿಯ ವಿರುದ್ಧ ಹೋರಾಡಲು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ’ ಎಂದರು.
‘ಉನ್ನತ ವ್ಯಾಸಂಗದ ವಿಷಯದಲ್ಲಿ ಕೆನಡಾ ನಮ್ಮ ವಿದ್ಯಾರ್ಥಿಗಳ ಪ್ರಮುಖ ಆದ್ಯತೆಯಾಗಿರುತ್ತದೆ. ಸುಮಾರು 1ಲಕ್ಷ 20 ಸಾವಿರ ನಮ್ಮ ವಿದ್ಯಾರ್ಥಿಗಳು ಅಲ್ಲಿದ್ದಾರೆ. ಕೆನಡಾ ಇಂಧನದ ಸೂಪರ್ ಪವರ್ ಆಗಿದ್ದು, ನಮ್ಮ ಅಗತ್ಯತೆಗಳನ್ನು ಪೂರೈಸುವ ಶಕ್ತಿ ಇದಕ್ಕಿದೆ’ ಎಂದರು.