ಹಾಸನ: ಶ್ರವಣಬೆಳಗೊಳದ ಬಾಹುಬಲಿಗೆ ಮಹಾ ಮಜ್ಜನ ಇಂದು ಬೆಳಗ್ಗೆ 5ರಿಂದ ಆರಂಭಗೊಂಡಿದೆ. ನಿರಂತರವಾಗಿ 9 ಗಂಟೆಗಳ ಕಾಲ ಗೊಮ್ಮಟೇಶ್ವರನಿಗೆ ವಿವಿಧ ಅಭಿಷೇಕಗಳನ್ನು ಮಾಡಲಾಗುತ್ತದೆ.
ಹಾಲು, ಕೇಸರಿ, ಅರಿಶಿಣ, ಅಕ್ಕಿ ಹಿಟ್ಟು, ಕಬ್ಬಿನ ಹಾಲು ಸೇರಿದಂತೆ ಹತ್ತು ಹಲವು ಬಗೆಯ ಸುಗಂಧಿತ ದ್ರವ್ಯಗಳಿಂದ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಜರುಗಲಿದೆ. ಜಲಾಭಿಷೇಕ, ಅಮೃತಾಭಿಷೇಕಗಳೂ ನಡೆಯಲಿವೆ.
ಮುಸ್ಸಂಜೆಯ ಹೊತ್ತಿಗೆ ಇಂದಿನ ಮಜ್ಜನ ಪೂರ್ಣಗೊಳ್ಳಲಿದ್ದು, ಮಹಾ ಮಂಗಳಾರತಿ ನಡೆಯಲಿದೆ.
ಫೆ.7ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಮಹಾ ಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ ದೊರಕಿತ್ತು. ಅಂದಿನಿಂದ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತಲೇ ಬಂದಿವೆ. ಇಂದಿನಿಂದ ಜನರು ಕಾತುರದಿಂದ ಕಾಯುತ್ತಿದ್ದ ಮಹಾ ಮಸ್ತಕಾಭಿಷೇಕ ಆರಂಭವಾಗಿದೆ. ಫೆ.25ರಂದು ಮಹೋತ್ಸವ ಸಮಾಪಣೆಗೊಳ್ಳಲಿದೆ.