ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ‘ಪರೀಕ್ಷಾ ಪರ್ ಚರ್ಚಾ’ವನ್ನು ಆಯೋಜಿಸಿದ್ದು, ದೇಶದ ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ದೆಹಲಿಯ ಟಾಲ್ಕಟೊರ ಸ್ಟೇಡಿಯಂನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಮೂಲೆ ಮೂಲೆಯ ವಿದ್ಯಾರ್ಥಿಗಳನ್ನು ಅವರು ಕನೆಕ್ಟ್ ಆದರು. ಅವರು ಕೇಳಿದ ಪ್ರಶ್ನೆಗಳಿಗೆ ಸುಲಲಿತವಾಗಿ ಉತ್ತರಿಸಿದರು.
ನಿಮ್ಮೊಳಗಿನ ವಿದ್ಯಾರ್ಥಿಯನ್ನು ಸದಾ ಜೀವಂತವಾಗಿರಿಸಿ ಎಂದು ಕರೆ ನೀಡಿದ ಮೋದಿ, ಯಾರೊಂದಿಗೂ ಸ್ಪರ್ಧೆಗಿಳಿಯಬೇಡಿ, ನಿಮ್ಮೊಂದಿಗೆ ನೀವು ಸ್ಪರ್ಧಿಸಿ ಆಗ ನೀವು ಅತ್ಯುನ್ನತ ಮಟ್ಟಕ್ಕೆ ಏರುತ್ತೀರಿ ಎಂದರು.
ಓದಿನ ವೇಳೆ ಗಮನ ಕೇಂದ್ರೀಕರಿಸುವ ಬಗ್ಗೆ ಮಕ್ಕಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯೋಗದಿಂದ ಶ್ರದ್ಧೆಯನ್ನು ಸಂಪಾದಿಸಲು ಸಾಧ್ಯ. ಕಲಿಕೆಯಿಂದ ಶ್ರದ್ಧೆ ಬರುವುದಿಲ್ಲ, ಪ್ರತಿಯೊಬ್ಬರಿಗೂ ಒಂದೊಂದರ ಮೇಲೆ ಶ್ರದ್ಧೆ ಇರುತ್ತದೆ. ಆತ್ಮವಿಶ್ವಾಸ ವಿದ್ಯಾರ್ಥಿಗಳಿಗೆ ಅತೀಮುಖ್ಯ ಎಂದು ಪ್ರತಿಪಾದಿಸಿದರು.
ವಿದ್ಯಾರ್ಥಿ ಜೀವನದಲ್ಲಿ ನಾನು ಸ್ವಾಮಿ ವಿವೇಕಾನಂದರ ತತ್ವಗಳ ಪಾಲನೆ ಮಾಡುತ್ತಿದೆ. ಅವರು ಹೇಳುವಂತೆ ನಮಗೆ ನಮ್ಮ ಮೇಲೆ ವಿಶ್ವಾಸವಿದ್ದರೆ 33 ಕೋಟಿ ದೇವತೆಗಳಿಂದಲೂ ಏನೂ ಮಾಡಲಾಗದು ಎಂದರು.
ಮಕ್ಕಳು ಹೆತ್ತವರು ಹೇಳುವ ಮಾತನ್ನು ಕೇಳಬೇಕು, ಅವರು ನಮ್ಮ ಒಳಿತಿಗಾಗಿ ಹೇಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಪೋಷಕರು ಮಕ್ಕಳ ಮೇಲೆ ವಿಪರೀತ ಒತ್ತಡ ಹಾಕುತ್ತಾರೆ. ತಮ್ಮಿಂದ ಸಾಧಿಸಲಾಗದ್ದನ್ನು ತಮ್ಮ ಮಕ್ಕಳಿಂದ ಸಾಧಿಸುವ ಪ್ರಯತ್ನ ಮಾಡುತ್ತಾರೆ ಇದು ಸಲ್ಲದು. ಮನೆಯಲ್ಲಿ ಮಕ್ಕಳ ಒತ್ತಡವನ್ನು ಕಡಿಮೆಗೊಳಿಸಬೇಕು ಎಂದರು.
ನಿಮ್ಮ ಸ್ನೇಹಿತರು ಎಷ್ಟು ಗಂಟೆ ಓದುತ್ತಾರೆ ಎಂಬ ಚಿಂತೆ ಬಿಟ್ಟು ಬಿಡಿ, ನಿಮಗೆ ಎಷ್ಟು ಗಂಟೆಯ ಓದು ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳಿ, ಪ್ರತಿದಿನ ನಿಮ್ಮ ಪ್ರಯತ್ನ ಉತ್ತಮವಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.