ಮಂಗಳೂರು : ಮಾರ್ಗಶಿರ ಶುದ್ಧ ಏಕಾದಶಿಯ ಪುಣ್ಯ ದಿನದಂದು ಗೀತಾಚಾರ್ಯ ಶ್ರೀ ಕೃಷ್ಣ ಅರ್ಜುನನಿಗೆ ಉಪದೇಶಿಸಿದ ಪರಮ ಪವಿತ್ರ ಗೀತೆಯೇ ಭಗವದ್ಗೀತೆ. ಈ ದಿನ ‘ಗೀತಾ ಜಯಂತಿ’ ಆಚರಣೆಯ ಪರ್ವಕಾಲ. ಮಂಗಳೂರು ಶಾರದಾ ವಿದ್ಯಾ ಸಂಸ್ಥೆ ಹಾಗೂ ಮಂಗಳೂರು ಸಂಸ್ಕೃತ ಸಂಘ ಮತ್ತು ಭಗವದ್ಗೀತಾ ಅಭಿಯಾನ ಸಮಿತಿ ಮಂಗಳೂರು ದಕ್ಷಿಣ ಕನ್ನಡ ಇದರ ಸಂಯುಕ್ತ ಆಶ್ರಯದಲ್ಲಿ ‘ಗೀತಾಜಯಂತಿ’ ಕಾರ್ಯಕ್ರಮವು ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ತಾರೀಕು 1-12-2017 ನೇ ಶುಕ್ರವಾರ ಬೆಳಿಗ್ಗೆ ಘಂಟೆ 10 ರಿಂದ ಸಾಯಂಕಾಲ 5.30 ರ ವರೆಗೆ ಜರಗಲಿದೆ. ಕಾರ್ಯಕ್ರಮವನ್ನು ಬೆಳಿಗ್ಗೆ 10 ಕ್ಕೆ ಚಿನ್ಮಯ ಮಿಷನ್ ಮಂಗಳೂರು ಇದರ ಆಚಾರ್ಯರಾದ ಶ್ರೀ ಬ್ರಹ್ಮಚಾರಿ ಸುಜಯಚೈತನ್ಯ ಇವರು ಉದ್ಘಾಟಿಸಿ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕರು ವಹಿಸಲಿದ್ದಾರೆ.
ಬೆಳಿಗ್ಗೆ ಗಂಟೆ 11.30 ರಿಂದ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಧರ್ಮವೃತಾನಂದಜಿ ಇವರಿಂದ ವಿಶೇಷ ಉಪನ್ಯಾಸ ಜರಗಲಿದೆ. ಮಧ್ಯಾಹ್ನ 1.30 ರಿಂದ 3.30 ರ ವರೆಗೆ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಗೀತಾ ಕಂಠಪಾಠ ಸ್ಪರ್ಧೆ ಜರುಗಲಿದೆ. ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಭಗವದ್ಗೀತಾ ರಸಪ್ರಶ್ನಾ ಸ್ಪರ್ಧೆ ಜರುಗಲಿದೆ. ಸಾಯಂಕಾಲ 3.30 ರಿಂದ 4.30 ರ ವರೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸ್ಕೃತ ಶೋಧ ಸಂಸ್ಥಾನ (ರಿ) ಶಿರಸಿ ಇದರ ಅಧ್ಯಕ್ಷರಾದ ಡಾ| ಜಿ.ಎನ್. ಭಟ್ ಇವರು ಸಮಾರೋಪ ಭಾಷಣ ಮಾಡಲಿದ್ದಾರೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆರ್ಚಕರಾದ ವೇದಮೂರ್ತಿ ವೆಂಕಟರಮಣ ಅಸ್ರಣ್ಣ ಇವರು ಶುಭಶಂಸನೆಗೈಯ್ಯಲಿದ್ದಾರೆ. ಹಾಗೂ ಮಂಗಳೂರು ಸಂಸ್ಕೃತ ಸಂಘದ ಅಧ್ಯಕ್ಷರಾದ ಶ್ರೀ ಕೆ.ಪಿ. ವಾಸುದೇವ ರಾವ್ ಇವರು ಅಧ್ಯಕ್ಷ ಸ್ಥಾನ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಯಂಕಾಲ 4.30 ರಿಂದ 5.30 ರ ವರೆಗೆ ಲೇಖಕಿ ಶ್ರೀಮತಿ ತೇಜಸ್ವಿನಿ ಹೆಗಡೆ ಬೆಂಗಳೂರು ವಿರಚಿತ ‘ಹಂಸಾಯನ’- ಕಾದಂಬರಿ ಬಿಡುಗಡೆ ಸಮಾರಂಭ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಖ್ಯಾತ ಕವಯತ್ರಿ ಶ್ರೀಮತಿ ಜ್ಯೋತಿ ಮಹಾದೇವ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರದೀಪ ಕುಮಾರ ಕಲ್ಕೂರ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು ಎಂಬುದಾಗಿ ಗೀತಾ ಜಯಂತಿ ಕಾರ್ಯಕ್ರಮದ ಸಂಯೋಜಕರಾದ ಶ್ರೀ ರಮೇಶ ಆಚಾರ್ಯ ನಾರಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕರು, ಗೀತಾ ಜಯಂತಿ ಕಾರ್ಯಕ್ರಮ ಶಾರದಾ ವಿದ್ಯಾಲಯ ಮಂಗಳೂರು (9449332653) ಇವರನ್ನು ಸಂಪರ್ಕಿಸಬಹುದು