ನವದೆಹಲಿ: ಭದ್ರತಾ ಪಡೆಗಳು ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಈ ವರ್ಷ ಅರ್ಧದಷ್ಟು ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿದೆ ಎಂದು ಸಿಆರ್ಪಿಎಫ್ ಡಿಜಿ ತಿಳಿಸಿದ್ದಾರೆ.
2016ಕ್ಕೆ ಹೋಲಿಸಿದರೆ ಈ ವರ್ಷ ಅರ್ಧದಷ್ಟು ಕಲ್ಲು ತೂರಾಟ ಪ್ರಕರಣ ಕಡಿಮೆಯಾಗಿದೆ ಎಂದು ಸಿಆರ್ಪಿಎಫ್ ಡೈರೆಕ್ಟರ್ ಜನರಲ್ ರಾಜೀವ್ ರಾಯ್ ಭಟ್ನಗರ್ ತಿಳಿಸಿದ್ದಾರೆ.
ಹೊಸ ಗುಣಮಟ್ಟದ ಕಾರ್ಯಾಚರಣೆ ಪ್ರಕ್ರಿಯೆ, ಜನಸಮೂಹವನ್ನು ನಿರ್ವಹಿಸಲು ಹೊಸ ತಂತ್ರಗಾರಿಕೆ, ಕಲ್ಲು ತೂರಾಟ ಆಯೋಜಿಸುವ ಪ್ರತ್ಯೇಕತಾವಾದಿಗಳ ವಿರುದ್ಧ ಎನ್ಐಎ ಕೈಗೊಂಡ ಕಠಿಣ ಕ್ರಮದಿಂದಾಗಿ ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷ ಸಿಆರ್ಪಿಎಫ್ ಒಟ್ಟು 75 ಉಗ್ರರನ್ನು ಹತ್ಯೆ ಮಾಡಿದೆ, 252 ಉಗ್ರರನ್ನು ಬಂಧಿಸಲಾಗಿದೆ ಮತ್ತು 118 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.