News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಪಿನ್ ಚಂದ್ರ ಪಾಲರ ಸ್ಮೃತಿ ದಿನ

ಭಾರತದ ರಾಜಕೀಯ ಇತಿಹಾಸದಲ್ಲಿ ಬಾಲ್ ಗಂಗಾಧರ ತಿಲಕ್ ಹಾಗೂ ಲಾಲಾ ಲಜಪತ್ ರಾಯ್ ಇವರ ಜೊತೆಗೂಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಬಿಪಿನ್ ಚಂದ್ರ ಪಾಲ್ ‘ಕ್ರಾಂತಿಕಾರಿ ವಿಚಾರಗಳ ಜನಕ’ರೆಂದೂ ಪ್ರಸಿದ್ಧರಾಗಿದ್ದಾರೆ. ಸಾಹಸ, ಸಹಕಾರ ಮತ್ತು ತ್ಯಾಗದ ಬಲದಿಂದ ಲಾಲ್-ಬಾಲ್-ಪಾಲ್ ಸಂಪೂರ್ಣ ರಾಜಕೀಯ ಸ್ವರಾಜ್ಯದ ಬೇಡಿಕೆಯನ್ನು ಪ್ರಸ್ತಾಪಿಸಿದವರು. ಇವರು ಪ್ರಾರಂಭಿಸಿದ ಸ್ವದೇಶೀ ಚಳುವಳಿಯು (ಕೇವಲ ಸ್ವದೇಶೀ ವಸ್ತುಗಳ ಬಳಕೆ) ಇಡೀ ರಾಷ್ಟ್ರವನ್ನೇ ವ್ಯಾಪಿಸಿತು.

ಸಿಲ್ಹಟ್­ನ (ಇಂದಿನ ಬಾಂಗ್ಲಾದೇಶ) ಒಂದು ಹಳ್ಳಿಯ ಶ್ರೀಮಂತ ಕುಟುಂಬದಲ್ಲಿ 7 ನವೆಂಬರ್, 1858 ರಂದು ಜನಿಸಿದ ಪಾಲ್, ತಮ್ಮ ಶಿಕ್ಷಣವನ್ನು ಮಾಧ್ಯಮಿಕ ಹಂತದಲ್ಲೇ ಮೊಟಕುಗೊಳಿಸಬೇಕಾಯಿತು. ಇದೇ ಸಮಯದಲ್ಲಿ ಅವರು ಕೇಶವಚಂದ್ರ ಸೇನ್ ಮತ್ತು ಪಂಡಿತ್ ಶಿವನಾಥ ಶಾಸ್ತ್ರೀ ಮುಂತಾದ ಪ್ರಖ್ಯಾತ ಬಂಗಾಳಿ ನೇತಾರರ ಸಂಪರ್ಕಕ್ಕೆ ಬಂದರು. 1907 ರಲ್ಲಿ ಪಾಲ್ ಇಂಗ್ಲೆಂಡಿನಲ್ಲಿ ವಿಚಾರವಾದಿ ವಿದ್ಯಾರ್ಥಿ ಆಗಿದ್ದರು. ಅಲ್ಲಿ ‘ಸ್ವರಾಜ್’ ಪತ್ರಿಕೆಯನ್ನು ಪ್ರಾರಂಭಿಸಿದ ಅವರು ಮುಂದಿನ ವರ್ಷವೇ ಭಾರತಕ್ಕೆ ಮರಳಿ ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ಬಂದೇ ಮಾತರಂ’ ಖಟ್ಲೆಯಲ್ಲಿ ಶ್ರೀ ಅರವಿಂದರವರ ವಿರುದ್ಧ ಸಾಕ್ಷ್ಯ ನೀಡಲು ನಿರಾಕರಿಸಿದ ಪಾಲ್ 6 ತಿಂಗಳ ಕಾರಾಗೃಹವಾಸವನ್ನು ಅನುಭವಿಸಬೇಕಾಯಿತು.

ಪಾಲ್ ಓರ್ವ ಶಿಕ್ಷಕ, ಪತ್ರಕರ್ತ, ಲೇಖಕ ಹಾಗೂ ಗ್ರಂಥಪಾಲಕ ಮುಂತಾದ ಹುದ್ದೆಗಳನ್ನು ವಹಿಸಿದವರು. ಆರಂಭದಲ್ಲಿ ಬ್ರಹ್ಮ ಸಮಾಜದ ಸಮರ್ಥಕರಾಗಿದ್ದ ಪಾಲ್, ವೇದಾಂತದ ಕಡೆಗೆ ವಾಲಿದರು. ಮುಂದೆ ಅವರು ಶ್ರೀ ಚೈತನ್ಯರ ವೈಷ್ಣವ ದರ್ಶನದ ಮುಂದಾಳತ್ವ ಕೂಡ ವಹಿಸಿದರು. ಸಮಾಜ ಸುಧಾರಕರಾದ ಪಾಲ್ ಜೀವನದಲ್ಲಿ ಎರಡು ಸಲ ಒಳ್ಳೆಯ ಮನೆತನದ ವಿಧವೆಯರನ್ನು ಮದುವೆ ಮಾಡಿಕೊಂಡಿದ್ದರು. ಅವರು ರಾಜಾರಾಮ ಮೋಹನರಾಯ, ಕೇಶವಚಂದ್ರ ಸೇನ್, ಶ್ರೀ ಅರವಿಂದ ಘೋಷ್, ರವೀಂದ್ರನಾಥ ಟಾಗೋರ್, ಆಶುತೋಷ್ ಮುಖರ್ಜಿ ಹಾಗೂ ಆನಿ ಬೆಸೆಟ್ ಮುಂತಾದ ಆಧುನಿಕ ಭಾರತದ ಶಿಲ್ಪಿಗಳ ಜೀವನವನ್ನು ಅಧ್ಯಯನ ಮಾಡಿ, ಒಂದು ಲೇಖನ ಮಾಲೆಯನ್ನು ಪ್ರಕಟಿಸಿದರು. ವ್ಯಾಪಕ ದೃಷ್ಟಿಕೋನ ನೀಡುವ ‘ಸಮಗ್ರ ದೇಶಭಕ್ತಿ’ಯನ್ನು ಅವರು ಉಪದೇಶಿಸಿದರು. ‘ಪರಿದರ್ಶಕ್’ (1886 – ಬಂಗಾಳಿ ಸಾಪ್ತಾಹಿಕ). ‘ನ್ಯೂ ಇಂಡಿಯಾ’ (1902 – ಆಂಗ್ಲ ಸಾಪ್ತಾಹಿಕ) ಹಾಗೂ ‘ಬಂದೇ ಮಾತರಂ’ (1906 – ಬಂಗಾಳಿ ದೈನಿಕ) ಅವರಿಂದ ಪ್ರಕಶಿಸಲ್ಪಟ್ಟ ಕೆಲವು ಪತ್ರಿಕೆಗಳು.

1886 ರ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ ಸಿಲ್ಹಟ್ ಅನ್ನು ಪ್ರತಿನಿಧಿಸಿದ್ದರು. 1930 ರಲ್ಲಿ ಅವರು ಗಾಂಧಿಯ ‘ಅಸಹಕಾರ ಚಳುವಳಿಗೆ’ ವಿರೋಧವನ್ನು ವ್ಯಕ್ತಪಡಿಸಿದ್ದರು. 1930 ರಲ್ಲೇ ಸಕ್ರಿಯ ರಾಜಕೀಯದಿಂದ ಸಂನ್ಯಾಸ ಪಡೆದ ಪಾಲ್, ರಾಷ್ಟ್ರೀಯ ಪ್ರಶ್ನೆಗಳ ಮೇಲೆ ಟಿಪ್ಪಣಿ ಮಾತ್ರ ಮಾಡ ತೊಡಗಿದರು. 20 ಮೇ 1932 ರಂದು ಭಾರತಮಾತೆಯು ಈ ಮಹಾನ್ ದೇಶಭಕ್ತನನ್ನು ಕಳೆದುಕೊಂಡಳು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top