ನವದೆಹಲಿ: ದೊಡ್ಡ ದೊಡ್ಡ ಸಮಾರಂಭಗಳಿಗೆಂದು ತಯಾರಿಸಲಾಗುವ ಆಹಾರಗಳು ತಿಂದು ಖಾಲಿಯಾಗುವುದಕ್ಕಿಂತ ವ್ಯರ್ಥವಾಗಿ ಕೊಳಚೆಯನ್ನು ಸೇರುವುದೇ ಹೆಚ್ಚು. ಒಂದೆಡೆ ಲಕ್ಷಾಂತರ ಮಂದಿ ಹಸಿವಿನಿಂದ ನರಳುತ್ತಿದ್ದರೆ ಮತ್ತೊಂದೆಡೆ ಅಪಾರ ಪ್ರಮಾಣದ ಮೃಷ್ಟಾನ್ನಗಳು ಹಾಳಾಗಿ ಹೋಗುತ್ತದೆ. ಆದರೆ ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಆದರೆ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ತಾರೆ, ಭಾರತೀಯ ಮೂಲದ ಫ್ರೀಡಾ ಪಿಂಟೋ ಅವರು ಈ ನಿಟ್ಟಿನಲ್ಲಿ ಜಗತ್ತಿನ ಕಣ್ಣು ತೆರೆಯುವಂತೆ ಮಾಡಿದ್ದಾರೆ, ಅತೀ ದೊಡ್ಡ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭವಾದ ಆಸ್ಕರ್ ಸಮಾರಂಭದಲ್ಲಿ ಮಿಕ್ಕುಳಿದ ಆಹಾರ ವ್ಯರ್ಥವಾಗದೆ 800 ಮಂದಿ ಬಡವರ ಹೊಟ್ಟೆ ಸೇರುವಂತೆ ಇವರು ನೋಡಿಕೊಂಡಿದ್ದಾರೆ.
ಕೊಪಿಯಾ ಟೀಂನೊಂದಿಗೆ ಕೈಜೋಡಿಸಿದ್ದ ಫ್ರೀಡಾ ಆಸ್ಕರ್ ಸಮಾರಂಭದಲ್ಲಿ ಹೆಚ್ಚುವರಿಯಾಗಿ ಉಳಿದಿದ್ದ ಆಹಾರಗಳನ್ನು ಸಮಾರಂಭ ಸ್ಥಳದಿಂದ 3.3 ಮೈಲಿ ದೂರದಲ್ಲಿರುವ ಲಾಸ್ ಏಂಜಲೀಸ್ನಲ್ಲಿನ ಬಡವರಿಗೆ ತಲುಪಿಸಿದ್ದಾರೆ.
ಆಸ್ಕರ್ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಸ್ವಾಗತ ಪಡೆದು ಗ್ಲಾಮರಸ್ ಫೋಸ್ ಕೊಡುವ ಸಿನಿಮಾ ತಾರೆಯರ ಸಾಲಿನಲ್ಲಿ ಫ್ರೀಡಾ ಕೊಂಚ ಭಿನ್ನವಾಗಿ ಈ ಬಾರಿ ನಿಂತಿದ್ದಾಳೆ. ತನ್ನ ಉತ್ತಮ ಕಾರ್ಯಕ್ಕಾಗಿ ಆಕೆ ಪ್ರಶಸ್ತಿ ಪಡೆದವರಿಗಿಂತಲೂ ಹೆಚ್ಚಿನ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದಾಳೆ.