ನವದೆಹಲಿ: ಎಚ್ಬಿ1 ವೀಸಾಕ್ಕೆ ಅಮೆರಿಕಾ ತಡೆಯೊಡ್ಡಿದ್ದೇ ಆದಲ್ಲಿ, ನಮ್ಮ ಸಂತಸ ಇಮ್ಮಡಿಯಾಗುತ್ತದೆ. ಪರಿಣಾಮ ಭಾರತ ಹಾಗೂ ಮೆಕ್ಸಿಕೊ ಸಂಬಂಧ ವೃದ್ಧಿಗೆ ಆದ್ಯತೆ ಸಿಗಲಿದೆ ಎಂದು ಮೆಕ್ಸಿಕೊದ ರಾಯಭಾರಿ ಮೆಲ್ಬಾ ಪ್ರಿಯಾ ತಿಳಿಸಿದ್ದಾರೆ.
ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅವರು, ಬದಲಾವಣೆ ಸಹಜ ಪ್ರಕ್ರಿಯೆ, ಪ್ರತಿ ದೇಶದ ಗಡಿಗಳಿಗೂ ಅದರದೇ ಆದ ಮಹತ್ವಗಳಿರುತ್ತವೆ. ವಲಸೆಗೆ ಸಂಬಂಧಿಸಿದಂತೆ ಕೆಲವೊಮ್ಮೆ ಕೃತಕ ಸನ್ನಿವೇಶಗಳೂ ಸೃಷ್ಟಿಯಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದು, ಪರೋಕ್ಷವಾಗಿ ಡೊನಾಲ್ಡ್ ಟ್ರಂಪ್ ಅವರು ಮೆಕ್ಸಿಕೋಗೆ ದೊಡ್ಡ ಗೋಡೆ ನಿರ್ಮಿಸುವ ನೀತಿಯನ್ನು ಉಲ್ಲೇಖಿಸಿದರು.
ಭಾರತ ಹಾಗೂ ಮೆಕ್ಸಿಕೊ ನಡುವಿನ ವಾಣಿಜ್ಯಿಕ ಸಂಬಂಧ ಅಭಿವೃದ್ಧಿಗೆ ಸಮಯ ಒದಗಿಬಂದಿದೆ. ಈ ಸಂದರ್ಭದಲ್ಲಿ ಮೆಕ್ಸಿಕೊ ಕಂಪೆನಿಗಳನ್ನೂ ಕೂಡಾ ಭಾರತದತ್ತ ಹೊರಳುವಂತೆ ಉತ್ತೇಜಿಸಲಾಗುವುದು ಎಂದಿದ್ದಾರೆ.
ಗಡಿ ಎಂದರೆ ಅದೊಂದು ಬಿಡುವಿಲ್ಲದ, ಪರಸ್ಪರ ಅಭ್ಯುದಯ, ಸ್ನೇಹ ಹಂಚಿಕೆಯ ಸ್ಥಳ ಎಂಬುದು ಮೆಕ್ಸಿಕೊ ದೃಷ್ಟಿಕೋನ. ಶ್ರೀಮಂತ ದೇಶದೊಂದಿಗೆ ಗಡಿಯನ್ನು ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹಾಗೂ ಸ್ನೇಹ, ತಂತ್ರಜ್ಞಾನ ಅಭಿವೃದ್ಧಿ ಈ ರೀತಿಯಾಗಿ ಧನಾತ್ಮಕ ಅಂಶಗಳೇ ನಮ್ಮ ಗಡಿ ನೀತಿಯಾಗಿವೆ ಎಂದು ಅವರು ಹೇಳಿದ್ದಾರೆ.
ಮೆಕ್ಸಿಕೋದ ಅಧ್ಯಕ್ಷರು ಹಾಗೂ ಯುಎಸ್ ಅಧ್ಯಕ್ಷ ಟ್ರಂಪ್ ಅವರು ದೂರವಾಣಿ ಸಂಭಾಷಣೆಯಲ್ಲಿ ಗೋಡೆ ನಿರ್ಮಾಣ ವೆಚ್ಚಕ್ಕೆ ಸಂಬಂಧಿಸಿದಂತೆಯೂ ಮಾತನಾಡಿದ್ದಾರೆ. ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಇಲ್ಲಿ ಪರಿಗಣಿಸಲಾಗಿದೆ. ಸಂಧಾನದಿಂದ ಉತ್ತಮ ಫಲಿತಾಂಶ ಬರುವ ಸಾಧ್ಯತೆ ಹೆಚ್ಚು ಎಂಬುದನ್ನು ಮೆಕ್ಸಿಕೊ ಬಲವಾಗಿ ನಂಬಿದೆ ಎಂದು ಅವರು ಹೇಳಿದ್ದಾರೆ.
ಮೆಕ್ಸಿಕೋದಿಂದ ವಲಸೆಯನ್ನು ತಡೆಯಲು ಭೌತಿಕ ಗೋಡೆ ನಿರ್ಮಾಣದ ಅವಶ್ಯಕತೆ ಇದೆಯೇ ?
ವಲಸೆಗೆ ಹಲವಾರು ಆಯಾಮಗಳಿವೆ. ಅಕ್ರಮ ವಲಸೆ ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಎಲ್ಲ ದೇಶದ ಆದ್ಯ ಕರ್ತವ್ಯ.
ಅಮೆರಿಕಕ್ಕೆ ತೆರಳುವ ಮೆಕ್ಸಿಕೊ ವಲಸಿಗರಲ್ಲಿ ವಿಭಿನ್ನ ರೀತಿಗಳಿವೆ. ಅಮೆರಿಕದ ಜಿಡಿಪಿ ಕೊಡುಗೆಯಲ್ಲಿ ಮೆಕ್ಸಿಕೋದವರ ಕೊಡುಗೆಯೂ ಅಪಾರವಿದೆ. ಆ ದೇಶದ ಹಿತದೃಷ್ಟಿಯಿಂದಲೇ ಕೆಲಸ ಮಾಡುವ ಮೆಕ್ಸಿಕೋದವರಿಗೇನು ಕಡಿಮೆ ಇಲ್ಲ. ಅಮೆರಿಕದಲ್ಲಿರುವ 5.70 ಲಕ್ಷಕ್ಕಿಂತಲೂ ಅಧಿಕ ವ್ಯಾಪಾರ ವಹಿವಾಟುಗಳು ಮ್ಯಾಕ್ಸಿಕೋ ಮೂಲದ ಕಂಪನಿಗಳಿಂದ ನಡೆಯುತ್ತಿವೆ. ಇದರಿಂದ ಉದ್ಯೋಗ ಸೃಷ್ಟಿ ಅಲ್ಲದೇ, ಅಮೆರಿಕದ ಬೊಕ್ಕಸಕ್ಕೆ ಗಣನೀಯ ಪ್ರಮಾಣದಲ್ಲಿ ಲಾಭವನ್ನೂ ತಂದುಕೊಡುವುದು ಗಮನಾರ್ಹ. ವೈದ್ಯರು, ಎಂಜಿಯರ್ ಇತ್ಯಾದಿಯಾಗಿ ಅನೇಕ ಉನ್ನತ ವ್ಯಾಸಂಗವುಳ್ಳ ವೃತ್ತಿಪರ ಮ್ಯಾಕ್ಸಿಕನ್ನರು ಅಮೆರಿಕದಲ್ಲಿದ್ದು ಆ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದ್ದಾರೆ.
ಸಂಶೋಧನೆಯೊಂದರ ಪ್ರಕಾರ 2009-2014 ರ ಅವಧಿಯಲ್ಲಿ ಅಮೆರಿಕದಿಂದ ಮೆಕ್ಸಿಕೊ ದೇಶಕ್ಕೆ ಮರಳುವವರ ಸಂಖ್ಯೆಯೇ ಹೆಚ್ಚಿದ್ದು, ಅಲ್ಲಿಗೆ ವಲಸೆ ಹೋಗುವವರ ಸಂಖ್ಯೆ ಕುಂಠಿತವಾಗಿದೆ.
ರಾಷ್ಟ್ರೀಯ ಹಾಗೂ ರಕ್ಷಣಾತ್ಮಕ ನೀತಿಗೆ ಒತ್ತು ಕೊಟ್ಟ ಅಮೆರಿಕದ ನಿಲುವುಗಳ ಪರಿಣಾಮ ಏನಾಗಬಹುದು ?
ಮೆಕ್ಸಿಕೊ ಹಾಗೂ ಅಮೆರಿಕ ಎರಡೂ ಸಾರ್ವಭೌಮತ್ವ ಹೊಂದಿದ ರಾಷ್ಟ್ರಗಳು. ತಮ್ಮ ದೇಶದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವಲ್ಲಿ ಅವರು ಸೂಕ್ತ ನಿಲುವಿಗೆ ಮುಂದಾಗುವ ಸ್ವಾತಂತ್ರ್ಯವಿದೆ. ಆದರೆ ಅದರೊಂದಿಗೆ ನೆರೆ ರಾಷ್ಟ್ರಗಳೊಂದಿಗಿನ ಸಂಬಂಧವೂ ಅಷ್ಟೇ ಮುಖ್ಯ. ಮೆಕ್ಸಿಕೊ ದೇಶಕ್ಕೆ ಸಂಬಂಧಿಸಿದಂತೆ ಅಮೆರಿಕದ ನಿಲುವು ಕುರಿತು ಹೇಳುವುದು ತರವಲ್ಲ. ಆದರೆ, ಯಾವುದೇ ಸಂದರ್ಭದಲ್ಲೂ ಅಮೆರಿಕದೊಂದಿಗಿನ ವಾಣಿಜ್ಯಿಕ ಸಂಬಂಧ ಎಂದಿನಂತೆ ಮುಂದುವರಿಯಲಿದೆ.
ಭಾರತ ಹಾಗೂ ಮೆಕ್ಸಿಕೊ ಸಂಬಂಧಗಳ ವೃದ್ಧಿಯಿಂದ ಆಗಬಹುದಾದ ಪರಿಣಾಮಗಳೇನು?
ಈಗಾಗಲೇ ಮೆಕ್ಸಿಕೋದಿಂದ ಭಾರತಕ್ಕೆ ವ್ಯಾಪಾರಾರ್ಥವಾಗಿ ಬರುವ ವಲಸಿಗರು ಸಾಕಷ್ಟಿದ್ದಾರೆ. ಆದರೆ ಒಂದು ವೇಳೆ ಯುಎಸ್ ಎಚ್1ಬಿ ವೀಸಾಕ್ಕೆ ಸಂಬಂಧಿಸಿದಂತೆ ಕಠಿಣ ನಿಲುವು ತಾಳಿದರೆ ಮೆಕ್ಸಿಕೊ ತನ್ನ ಕಂಪನಿಗಳನ್ನು ಭಾರತದತ್ತ ಹೊರಳಿಸುತ್ತದೆ. ಮೆಕ್ಸಿಕೋದಲ್ಲಿ ಅನೇಕ ಭಾರತೀಯ ಐಟಿ ಕಂಪನಿಗಳಿಗೆ ಅವಕಾಶಗಳ ಬಾಗಿಲು ತೆರೆಯಲಾಗುತ್ತದೆ. ಇದೊಂದು ಸದವಕಾಶ.
ಪ್ರಸ್ತುತ ಪರಿಸ್ಥಿತಿಯಿಂದ ಕಲಿತ ಪಾಠ ?
ಇನ್ನೂ ಯಾವುದೇ ರೀತಿಯ ನಿಲುವುಗಳು ಜಾರಿಗೆ ಬಂದಿಲ್ಲ. ಮಾಧ್ಯಮಗಳಲ್ಲಿ ಈ ಕುರಿತು ಚರ್ಚೆಗಳು, ಸುದ್ದಿಗಳು ಬಿತ್ತರಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂವಾದಗಳೂ ಉಭಯ ದೇಶಗಳ ನಡುವೆ ನಡೆಯುತ್ತಿವೆ. ಆದರೆ ಒಂದಂತೂ ಸತ್ಯ, ಮೆಕ್ಸಿಕೊ ಯಾವಾಗಲೂ ಪರಸ್ಪರ ಮಾತುಕತೆ ಮೂಲಕ ಎಲ್ಲ ಸಮಸ್ಯೆಗೆ ಪರಿಹಾರ ಇದೆ ಎಂದು ಭಾವಿಸಿದೆಯೇ ಹೊರತು, ಯಾವುದನ್ನು ಕಡ್ಡಾಯವಾಗಿ ಹೇರುವುದರಿಂದ ಪರಿಹಾರ ಸಿಗುತ್ತದೆಂಬ ವಿಶ್ವಾಸವಿಲ್ಲ.
ಪರೋಕ್ಷವಾಗಿ ಮೆಲ್ಬಾ ಪ್ರಿಯಾ ಅವರು ಟ್ರಂಪ್ ಅವರ ನಿಲುವನ್ನು ಟೀಕಸಿದ್ದು, ಭಾರತ ಹಾಗೂ ಮೆಕ್ಸಿಕೊ ಸಂಬಂಧ ವೃದ್ಧಿಸುವ ಕುರಿತು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಇವೆಲ್ಲದರ ಜಾಗತಿಕ ಪರಿಣಾಮವನ್ನು ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.