ನವದೆಹಲಿ : ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ಫಾರಿನ್ ಪಾಲಿಸಿ ನಿಯತಕಾಲಿಕೆಯ ‘2016 ರ ಜಾಗತಿಕ ಚಿಂತಕಿ’ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ.
ಟ್ವಿಟರ್ ರಾಜತಂತ್ರವನ್ನು ಬಳಸಿಕೊಂಡು ಜನರ ಸಮಸ್ಯೆಗಳನ್ನು ಪರಿಹರಿಸುತ್ತಿರುವ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಫಾರಿನ್ ಪಾಲಿಸಿ ನಿಯತಕಾಲಿಕವು 2016 ರ ಜಾಗತಿಕ ಚಿಂತಕಿ ಎಂದು ಹೆಸರಿಸಿದೆ. ಪತ್ರಿಕೆ ಆಯ್ಕೆ ಮಾಡಿದ ‘ವರ್ಷದ 15 ಜಾಗತಿಕ ಚಿಂತಕ’ರ ಪಟ್ಟಿಯಲ್ಲಿ ಸುಷ್ಮಾ ಸ್ವರಾಜ್ ಅವರೂ ಒಬ್ಬರಾಗಿದ್ದಾರೆ.
ವಿದೇಶಾಂಗ ಸಚಿವೆ ಸ್ಥಾನವನ್ನು ವಹಿಸಿಕೊಂಡಂದಿನಿಂದಲೂ ನಿರಂತರವಾಗಿ ಟ್ವೀಟ್ಗಳಿಗೆ ಸ್ಪಂದಿಸುತ್ತಾ, ಬಿಡುವಿಲ್ಲದೆ ಕೆಲಸ ನಿರ್ವಹಿಸುತ್ತಿರುವ ಸುಷ್ಮಾ ಸ್ವರಾಜ್ ಅವರು ನೆರವು ಕೋರಿದವರಿಗೆ ನೆರವು ಸಿಗುವಂತೆ ಮಾಡಿ ಅವರ ಸಮಸ್ಯೆ ನಿವಾರಿಸುವಲ್ಲಿ ಎಲ್ಲಾ ಸೂಕ್ತ ಕ್ರಮಗಳನ್ನೂ ಕೈಗೊಳ್ಳುತ್ತಾರೆ. ಸಮಸ್ಯೆ ಎಷ್ಟು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದರತ್ತ ಗಮನ ಕೊಡುತ್ತಾರೆ. ಭಾರತೀಯರು ಮಾತ್ರವಲ್ಲದೆ, ವಿದೇಶಿಗರಿಗೂ ಟ್ವೀಟ್ ಮೂಲಕ ಸ್ಪಂದಿಸಿ ನೆರವು ನೀಡಿದ್ದಾರೆ. ಕೊಲ್ಲಿಯಲ್ಲಿ ಹಸಿವಿನಿಂದ ಬಳಲುತ್ತಿದ್ದ 10 ಸಾವಿರ ಮಂದಿಯ ರಕ್ಷಣೆ, ಬ್ರಿಟಿಷ್ ದಂಪತಿಗಳ ಪಾಸ್ಪೋರ್ಟ್ ಸಮಸ್ಯೆ, ಹೀಗೆ ಅನೇಕ ವಿಷಯಗಳಲ್ಲಿ ನೆರವು ನೀಡಿ ವಿದೇಶಾಂಗ ನೀತಿಯಲ್ಲಿ ದಾಖಲಾಗುವಂತಹ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಸ್ವತಃ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲೂ ಅವರು ಜನರ ಸಮಸ್ಯೆಗಳಿಗೆ ಟ್ವೀಟ್ ಮೂಲಕ ಸ್ಪಂದಿಸಿದ್ದಾರೆ ಎಂದು ಫಾರಿನಿ ಪಾಲಿಸಿ ನಿಯತಕಾಲಿಕವು ಸುಷ್ಮಾ ಸ್ವರಾಜ್ ಅವರನ್ನು ಶ್ಲಾಘಿಸಿದೆ.
ಹಿಲರಿ ಕ್ಲಿಂಟನ್, ಆಂಗೇಲಾ ಮರ್ಕೆಲಾ ಮತ್ತು ಜಸ್ಟಿನ್ ಟ್ರುಡಿ ಸೇರಿದಂತೆ 15 ಮಂದಿಯನ್ನು ಜಾಗತಿಕ ಚಿಂತಕರ ಸಾಲಿನಿನಲ್ಲಿ ಆಯ್ಕೆ ಮಾಡಲಾಗಿದೆ.
15 ಮಂದಿ ಜಾಗತಿಕ ಚಿಂತಕರ ಸಾಲಿಗೆ ಸುಷ್ಮಾ ಸ್ವರಾಜ್ ಅವರು ಸೇರ್ಪಡೆಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದು, ಮೊತ್ತ ಮೊದಲು ಅವರೇ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
Very proud to see our hardworking EAM @SushmaSwaraj part of the @ForeignPolicy Global Thinkers list 2016! Congrats. https://t.co/92H4a2drCI
— Narendra Modi (@narendramodi) December 14, 2016
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಫಾರಿನಿ ಪಾಲಿಸಿಯ 2016 ರ ಜಾಗತಿಕ ಚಿಂತಕರ ಪಟ್ಟಿಯಲ್ಲಿ ಆಯ್ಕೆಯಾಗಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.