ನವದೆಹಲಿ : ಖಂಡಾಂತರ ಕ್ಷಿಪಣಿ ಅಗ್ನಿ-5 ರ ಅಂತಿಮ ಹಂತದ ಪರೀಕ್ಷೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ.
ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ ‘ಅಗ್ನಿ-5’ ರ ಅಂತಿಮ ಹಂತದ ಪರೀಕ್ಷೆ ನಡೆಸಲು ಒಡಿಶಾದ ವೀಲ್ಹರ್ ದ್ವೀಪದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿ 2017 ರ ಮೊದಲ ವಾರದಲ್ಲಿ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.
ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಈ ಪ್ರಬಲ ಅಣ್ವಸ್ತ್ರ ಕ್ಷಿಪಣಿಯನ್ನು ಸಿದ್ಧಪಡಿಸಿದ್ದು, ಸುಮಾರು 5 ಸಾವಿರ ಕಿ.ಮೀ. ದೂರದ ಗುರಿಯನ್ನು ಸಮರ್ಥವಾಗಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಈ ಮೊದಲು 2012 ರ ಏಪ್ರಿಲ್, 2013 ರ ಸೆಪ್ಟೆಂಬರ್ ಮತ್ತು 2015 ರ ಜನವರಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಮೂರೂ ಪರೀಕ್ಷೆಗಳು ಯಶಸ್ವಿಯಾಗಿತ್ತು. ಕೆಲವೊಂದು ತಾಂತ್ರಿಕ ಅಡಚಣೆಗಳನ್ನು ಸರಿಪಡಿಸಲಾಗಿದ್ದು ಇದೀಗ ಅಂತಿಮ ಪರೀಕ್ಷೆಗೆ ಸಿದ್ಧವಾಗಿದೆ.
ಅಗ್ನಿ-5 ಮೂರು ಸ್ತರದ ಕ್ಷಿಪಣಿಯಾಗಿದ್ದು,17 ಮೀ. ಉದ್ದ ಮತ್ತು 50 ಟನ್ ಭಾರವಿದೆ. ಮೊದಲ ಹಂತದ ರಾಕೆಟ್ ಎಂಜಿನ್ ಕ್ಷಿಪಣಿಯನ್ನು 40 ಕಿ.ಮೀ. ಎತ್ತರಕ್ಕೆ ನೂಕಿದರೆ, ಎರಡನೇ ಹಂತದ ರಾಕೆಟ್ ಎಂಜಿನ್ ಕ್ಷಿಪಣಿಯನ್ನು 150 ಕಿ.ಮೀ. ಎತ್ತರಕ್ಕೆ ನೂಕುತ್ತದೆ. ಹಾಗೆಯೇ 3ನೇ ಹಂತದದಲ್ಲಿ ರಾಕೆಟ್ ಎಂಜಿನ್ ಭೂಮಿಗಿಂತ 300 ಕಿ.ಮೀ. ಎತ್ತರಕ್ಕೆ ನೂಕಿ, ಅಂತಿಮವಾಗಿ ಸುಮಾರು 800 ಕಿ.ಮೀ. ಎತ್ತರಕ್ಕೆ ಕ್ಷಿಪಣಿ ತಲುಪುತ್ತದೆ. ಸುಮಾರು 1 ಸಾವಿರ ಕೆಜಿ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಪ್ರಬಲ ‘ಅಗ್ನಿ 5’ ಕ್ಷಿಪಣಿಗಿದೆ.
ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಈ ಕ್ಷಿಪಣಿಯನ್ನು ದೇಶದ ಯಾವುದೇ ಮೂಲೆಯಿಂದಾದರೂ ತ್ವರಿತವಾಗಿ ಉಡಾಯಿಸಬಹುದಾಗಿದೆ.
ಪರಮಾಣು ಶಕ್ತಿ ಖಾತೆಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಅವರ ಅನುಮೋದನೆ ಬಳಿಕೆ ಈ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆ ಮಾಡಲಾಗುತ್ತದೆ. ಅಂತಿಮ ಪರೀಕ್ಷೆಯ ಬಳಿಕ ಈ ಪ್ರಬಲ ಮತ್ತು ವಿಧ್ವಂಸಕ ಕ್ಷಿಪಣಿ ಸೇನೆಗೆ ಸೇರ್ಪಡೆಯಾಗಲಿದೆ ಎನ್ನಲಾಗಿದೆ. ಇದರೊಂದಿಗೆ 5000 ಕಿ.ಮೀ. ಗೂ ದೂರದ ಗುರಿ ತಲುಪುವ ಸಾಮರ್ಥ್ಯದ ಕ್ಷಿಪಣಿ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಲಿದೆ. ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ಬಳಿ ಮಾತ್ರ 5000 ಕಿ.ಮೀ. ಗಿಂತ ಹೆಚ್ಚಿ ದೂರ ತಲುಪುವ ಕ್ಷಿಪಣೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.