ನವದೆಹಲಿ : ಪೆಟ್ರೋಲ್ ಖರೀದಿಸುವಾಗ ಡಿಜಿಟಲ್ ಪಾವತಿ ಮಾಡಿದರೆ ಶೇ. 0.75 ರಷ್ಟು ರಿಯಾಯಿತಿ ದೊರೆಯಲಿದೆ. ಕೇಂದ್ರ ಸರ್ಕಾರದ ಈ ನೂತನ ಸೇವೆ ಇಂದಿನಿಂದ ದೇಶಾದ್ಯಂತ ಜಾರಿಯಾಗಲಿದೆ.
ನಗದು ರಹಿತ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಇನ್ನೊಂದು ಸೇರ್ಪಡೆ ಎಂಬಂತೆ ಮಂಗಳವಾರದಿಂದ ಇನ್ನೊಂದು ನೂತನ ಸೇವೆ ಜಾರಿಯಾಗಲಿದೆ.
ಡಿಜಿಟಲ್ ಪಾವತಿ ಮೂಲಕ ಪೆಟ್ರೋಲ್ ಅಥವಾ ಡೀಸೆಲ್ ಖರೀದಿ ಮಾಡಿದರೆ ಶೇ. 0.75 ರಷ್ಟು ರಿಯಾಯಿತಿ ದೊರೆಯಲಿದೆ. ನಗದು ರಹಿತವಾಗಿ ಪೆಟ್ರೋಲ್ ಖರೀದಿ ಮಾಡುವ ಗ್ರಾಹಕರ ಖಾತೆಗೆ ನೇರವಾಗಿ ರಿಯಾಯಿತಿ ಹಣವನ್ನು 3 ದಿನಗಳಲ್ಲಿ ಹಿಂದಿರುಗಿಸಲಾಗುತ್ತದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ ಮಂಗಳವಾರದಿಂದ ಈ ನೂತನ ಯೋಜನೆಯನ್ನು ಜಾರಿಗೊಳಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್, ‘ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸುವಾಗ ಕಾರ್ಡ್, ಮೊಬೈಲ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಿದರೆ ಶೇ. 0.75 ರಷ್ಟು ರಿಯಾಯಿತಿ ದೊರೆಯಲಿದೆ. ಇದರ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್ ಖರೀದಿ ಮೇಲೆ ಸುಮಾರು 40 ರಿಂದ 45 ಪೈಸೆ ಉಳಿತಾಯವಾಗಲಿದೆ. ಈ ಹಣವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ರವಾನಿಸುತ್ತದೆ ಎಂದು ಹೇಳಿಕೆ ನೀಡಿದೆ.
ಡಿಸೆಂಬರ್ 8 ರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ನಗದು ರಹಿತ ವಹಿವಾಟನ್ನು ಉತ್ತೇಜಿಸಲು ವಿನಾಯಿತಿ ಜೊತೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದಾಗಿ ಘೋಷಿಸಿದ್ದರು. ಈಗಾಗಲೇ ವಿಮಾ ಪಾಲಿಸಿ, ರೈಲು ಟಿಕೆಟ್, ಹೆದ್ದಾರಿ ಟೋಲ್ ಶುಲ್ಕಗಳನ್ನು ಸಂಗ್ರಹಿಸಲು ಡಿಜಿಟಲ್ ಪಾವತಿ ಕ್ರಮಗಳನ್ನು ಅಳವಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.